ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದ ಹಿನ್ನಲೆ-ತಕ್ಷಣವೇ ರಾಜ್ಯಪಾಲರು ಮದ್ಯಪ್ರವೇಶಿಸಬೇಕು

ಬೆಂಗಳೂರು, ಜು.10-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡು ಅಲ್ಪ ಮತಕ್ಕೆ ಕುಸಿದ ಹಿನ್ನೆಲೆಯಲ್ಲಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಉಪನಾಯಕ ಗೋವಿಂದ ಕಾರಜೋಳ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಸುರೇಶ್‍ಕುಮಾರ್ ಸೇರಿದಂತೆ ಶಾಸಕರು, ಪರಿಷತ್ ಸದಸ್ಯರು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯ ವಿ.ಆರ್.ವಾಲಾ ಅವರನ್ನು ಭೇಟಿಯಾಗಿ ದೂರು ನೀಡಿದರು.

ಹದಿನಾಲ್ಕು ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಕುಮಾರಸ್ವಾಮಿ ಸರ್ಕಾರ ಅಲ ಮತ್ಕೆ ಕುಸಿದಿದೆ. ಶಾಸಕರರಾಜೀನಾಮೆಗಳನ್ನು ಸ್ವೀಕರಿಸಲು ವಿಧಾನಸಭೆ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಬಹುಮತ ಕಳೆದುಕೊಂಡಿರುವ ಸರ್ಕಾರ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಅಧಿಕಾರಿಗಳ ವರ್ಗಾವಣೆ, ಯೋಜನೆಗಳ ಹೆಸರಿನಲ್ಲಿ ಅನುದಾನ ಬಿಡುಗಡೆ ಸೇರಿದಂತೆ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ರಾಜ್ಯಪಾಲರು ಯಾವ ಕಾರಣಕ್ಕಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಶಾಸಕರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರುವಾಗ ಅಂಗೀಕರಿಸುವುದು ಅವರ ಕರ್ತವ್ಯ. ಶುಕ್ರವಾರ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೆ, ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಬೇಕು.ಕೂಡಲೇ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳನ್ನು ಕರೆದು ಸೂಕ್ತ ನಿರ್ದೇಶನ ನೀಡಬೇಕು. ಸಾಧ್ಯವಾದರೆ ಸ್ಪೀಕರ್ ಅವರಿಗೂ ರಾಜೀನಾಮೆ ಪತ್ರ ಅಂಗೀಕರಿಸಲು ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಕೂಡಲೇ ಮಧ್ಯಪ್ರವೇಶ ಮಾಡಬೇಕೆಂಬ ನಮ್ಮ ಮನವಿಗೆಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳಿಂದ ಎಲ್ಲಾ ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಿದ್ದೇನೆ. ಅಗತ್ಯ ಕಂಡುಬಂದಲ್ಲಿ ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ನಡೆಸುವುದಾಗಿ ತಿಳಿದಿದ್ದಾರೆ ಎಂದು ಬಿಎಸ್‍ವೈ ಹೇಳಿದರು.

ಮುಖ್ಯಮಂತ್ರಿಗಳು ರಾಜೀನಾಮೆಕೊಡದಿದ್ದರೆಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ಅಧಿವೇಶನದಲ್ಲೂ ಹೋರಾಟಮಾಡುವ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಬಿಜೆಪಿ ಪ್ರತಿಭಟನೆ:
ಇದಕ್ಕೂ ಮುನ್ನ ಬಹುಮತ ಕಳೆದುಕೊಂಡಿರುವ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಮಹಾತ್ಮಗಾಂಧೀಜಿ ಪ್ರತಿಮೆ ಬಳಿ ಬಿಜೆಪಿಯ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಧರಣಿ ನಡೆಸಿದ ವೇಳೆ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಲಾಯಿತು.

ಭ್ರಷ್ಟ ಸರ್ಕಾರ ರಾಜೀನಾಮೆ ನೀಡಲಿ ಎಂದು ಘೋಷಣೆ ಕೂಗಿದ್ದಲ್ಲದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿದ ಸಿಎಂ ತೊಲಗಲಿ ಎಂಬ ಫಲಕಗಳನ್ನು ಪ್ರದರ್ಶಿಶಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿದ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಮೈತ್ರಿ ಸರ್ಕಾರ ಬಹುತೇಕ ಬಹುಮತ ಕಳೆದುಕೊಂಡಿದೆ.ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆಯಲ್ಲಿ ಸರ್ಕಾರ ತೊಡಗಿದೆ. ಈಗಾಗಲೇ 14 ಶಾಸಕರು ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ನಾವು ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ. ಎಲ್ಲ ವಿಷಯವನ್ನು ಅವರ ಗಮನಕ್ಕೆ ತರುತ್ತೇವೆ ಎಂದರು.

ಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಆದೇಶಿಸಲು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ. ಜತೆಗೆ ಸಭಾಧ್ಯಕ್ಷ ರಮೇಶ್‍ಕುಮಾರ ಅವರನ್ನು ಭೇಟಿ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮುಂಬೈ ಹೋಟೆಲ್ ಮುಂದೆ ನಾಟಕವಾಡುತ್ತಿದ್ದಾರೆ.ಅವರ ಆತ್ಮೀಯರೇ ಅವರನ್ನು ಭೇಟಿ ಮಾಡಲು ಇಷ್ಟಪಡುತ್ತಿಲ್ಲ, ಆದರೂ ದಬ್ಬಾಳಕೆ ಮಾಡುತ್ತಿದ್ದಾರೆ. ಶಾಸಕರ ರಾಜೀನಾಮೆ ಪತ್ರ ಹರಿದು ಹಾಕಿ ಗುಂಡಾಗಿರಿ ವರ್ತನೆ ಮಾಡಿದ ಅವರು, ಇದೀಗ ಬುದ್ಧಿವಾದ ಹೇಳಲು ಬಂದಿದ್ದಾರೆ. ಈ ಎಲ್ಲ ವಿಚಾರಗಳನ್ನು ಕೇಂದ್ರ ಗೃಹಸಚಿವರ ಗಮನಕ್ಕೂ ತರುತ್ತಿದ್ದೇವೆ. ಬಹುಮತ ಇಲ್ಲದ ಮೇಲೆ ರಾಜೀನಾಮೆ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.

ಅತೃಪ್ತರ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ನಾಳೆ ನಡೆಯಲಿದೆ. ಡಿಕೆಶಿ ವರ್ತನೆ ಖಂಡಿಸಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಬಹುಮತ ಇಲ್ಲದಿದ್ದರು ಅಧಿವೇಶನ ನಡೆಸುವುದಾದರು ಹೇಗೆ ಎಂದು ಪ್ರಶ್ನಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜೀನಾಮೆ ನೀಡಿರುವವರಲ್ಲಿ 8 ಮಂದಿಯ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದೆ. ಉಳಿದ ರಾಜೀನಾಮೆಗಳು ಕ್ರಮಬದ್ಧವಾಗಿಲ್ಲ ಎಂದರೆ ಏನ್ ಅರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಸಭಾಧ್ಯಕ್ಷರಿಗೆ ಓಪನ್ ಚಾಲೆಂಜ್ ಹಾಕುತ್ತೇನೆ ಕೆಲವು ರಾಜೀನಾಮೆ ಮಾತ್ರ ಕ್ರಮಬದ್ಧ ಎಂದಿರುವುದು ಯಾವು ರೀತಿ ಇಂತಹ ನಡೆಯಿಂದ ಗೌರವ ಹಾಳಾಗುತ್ತದೆ.ಸಂವಿಧಾನಬದ್ಧ, ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಶ್ರೀರಾಮುಲು ಮಾತನಾಡಿ, ಸ್ವಪ್ರೇರಣೆಯಿಂದ ರಾಜೀನಾಮೆ ಕೊಟ್ಟರೆ ಅಂಗೀಕರಿಸಬೇಕು. ಮೈತ್ರಿ ಸರ್ಕಾರದ ಕಚ್ಚಾಟದಿಂದ ರಾಜೀನಾಮೆ ನೀಡಿದ್ದರೂ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಜನರ ದಿಕ್ಕುತಪ್ಪಿಸುವ ಕೆಲಸ ಮಾಡಬಾರದು. ನಿಮಗೆ ಒತ್ತಡವಿದ್ದರೆ ರಾಜ್ಯಪಾಲರ ಗಮನಕ್ಕೆ ತನ್ನಿ ಎಂದು ಕಿಡಿಕಾರಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಜನ ವಿರೋಧಿ ಸರ್ಕಾರ ತೊಲಗಲಿ ಎಂದರು.

ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಎಂ.ಉದಾಸಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ