ಸರ್ಕಾರ ರಕ್ಷಿಸಿಕೊಳ್ಳಲು ತ್ರಿವಿಕ್ರಮರಂತೆ ಪ್ರಯತ್ನಿಸುತ್ತಿರುವ ಕಾಂಗ್ರೇಸ್ ನಾಯಕರು

ಬೆಂಗಳೂರು, ಜು.10- ಸಮ್ಮಿಶ್ರ ಸರ್ಕಾರವನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ನಾಯಕರು ತ್ರಿವಿಕ್ರಮರಂತೆ ಪ್ರಯತ್ನ ನಡೆಸುತ್ತಿದ್ದು, ಇಂದು ಕುಮಾರಕೃಪ ಅತಿಥಿ ಗೃಹದಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ರಣತಂತ್ರಗಳನ್ನು ರೂಪಿಸಿದರು.

ಬೆಂಗಳೂರಿಗೆ ಆಗಮಿಸಿರುವ ರಾಷ್ಟ್ರಮಟ್ಟದ ಟ್ರಬಲ್‍ಶುಟರ್ ಗುಲಾಬ್‍ನಬಿಆಜಾದ್ ಅವರ ನೇತೃತ್ವದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಹಿರಿಯ ಮುಖಂಡರಾದ ಬಿ.ಕೆ.ಹರಿಪ್ರಸಾದ್ ಮತ್ತಿತರರು ಸಭೆಗಳನ್ನು ನಡೆಸಿದರು.

ಒಂದೆಡೆ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದ್ದು, ಮತ್ತೊಂದೆಡೆ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾನೂನು ಕ್ರಮಕ್ಕೂ ಪ್ರಯತ್ನಗಳು ನಡೆಯುತ್ತಿವೆ.

ರಾಜೀನಾಮೆ ಅಂಗೀಕರಿಸದೆ ಸ್ಪೀಕರ್ ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪರವಾಗಿ ಸುಪ್ರೀಂಕೋರ್ಟ್‍ನಲ್ಲಿ ಬಲವಾದ ವಾದ ಮಂಡಿಸಲು ಹಿರಿಯ ವಕೀಲರಾದ ಅಭಿಷೇಕ್ ಸಿಂಗ್ವಿ ಅವರನ್ನು ನಿಯೋಜಿಸುವ ಸಾಧ್ಯತೆ ಇದೆ.

ಕಾಂಗ್ರೆಸ್‍ನ ಕಾನೂನು ತಜ್ಞರಾದ ಕಪೀಲ್ ಸಿಬಾಲ್, ಚಿದಂಬರಂ ಮತ್ತಿತರರು ಸುಪ್ರೀಂಕೋರ್ಟ್‍ನ ವಿಚಾರಣೆ ಕಡೆ ನಿಗಾವಹಿಸಲಿದ್ದಾರೆ.

ಮತ್ತೊಂದೆಡೆ ಅತೃಪ್ತರನ್ನು ಮನವೊಲಿಸುವ ಸಲುವಾಗಿ ಅವರು ಕೇಳಿದ ಖಾತೆಗಳನ್ನು ನೀಡುವುದು, ಈಗಿರುವ ಉಪಮುಖ್ಯಮಂತ್ರಿ ಜತೆಗೆ ಮತ್ತೊಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟು ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ. ರಾಮಲಿಂಗಾರೆಡ್ಡಿ ಸಮಾಧಾನಗೊಂಡರೆ ನಾಲ್ಕು ಅತೃಪ್ತ ಶಾಸಕರು ವಾಪಸ್ ಮರಳುವ ಸಾಧ್ಯತೆ ಇದೆ.

ಇನ್ಯಾವಾ ಶಾಸಕರೂ ಕಾಂಗ್ರೆಸ್-ಜೆಡಿಎಸ್ ತೊರೆಯದಂತೆ ಎಚ್ಚರಿಕೆ ವಹಿಸಿ ಬೆಂಗಳೂರಿನ ನಾಲ್ಕು ಮಂದಿ ಶಾಸಕರನ್ನು ವಾಪಸ್ ಕರೆತಂದರೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಉಳಿಯಲಿದೆ ಎಂಬ ಖಚಿತತೆ ಸಿಗುತ್ತಿದ್ದಂತೆ ರಾಜೀನಾಮೆ ಕೊಟ್ಟು ಹೋಗಿರುವ ಹಲವು ಶಾಸಕರು ಮರಳಿ ಬರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ