ಬೆಂಗಳೂರು,ಜು.9- ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, 15ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಾಳೆ (ಜು. 10) ಬೆಳಿಗ್ಗೆ 11ಗಂಟೆಗೆ ಆನಂದರಾವ್ ವೃತ್ತದ ಗಾಂಧಿಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಯುಕ್ತ ಜನತಾ ದಳ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಜನತಾ ದಳ ನಗರ ಅಧ್ಯಕ್ಷ ಕೆ.ಎಂ.ಪಾಲಾಕ್ಷ ಮಾತನಾಡಿ, ರಾಜ್ಯದಲ್ಲಿ ಕಳೆದ 14 ತಿಂಗಳಿಂದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದೂ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಆದ್ದರಿಂದ ಈ ಸರ್ಕಾರವನ್ನು ವಜಾಗೊಳಿಸಬೇಕೆಂಂದು ಒತ್ತಾಯಿಸಿದರು.
ರಾಜಕಾರಣಿಗಳಿಗೆ ಸಚಿವ ಸ್ಥಾನ ಸಿಗುತ್ತಿಲ್ಲ ಎಂದು ಜನರ ಸಮಸ್ಯೆಗಳನ್ನು ಮರೆತು, ತಮ್ಮ ಸ್ಥಾನಮಾನಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಇದು ನಾಚಿಕೆಗೇಡು ಎಂದು ಹೇಳಿದರು.
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರವಿದೆ. ರೈತರು, ಜನರು ಸಂಕಷ್ಟ ಪರಿಸ್ಥಿತಿಗೆ ಒಳಗಾಗಿದ್ದಾರೆ. ಸರ್ಕಾರದಿಂದ ಯಾವ ಸಣ್ಣ ಕೆಲಸಗಳೂ ಆಗುತ್ತಿಲ್ಲ ಆದ್ದರಿಂದ ಈ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಪಾಲಾಕ್ಷ ರಾಜ್ಯಪಾಲರನ್ನು ಒತ್ತಾಯಿಸಿದರು.