ಬೆಂಗಳೂರು,ಜು.9- ಸರ್ಕಾರ ರಚನೆಗೆ ಈಗ ತೀವ್ರ ಕಸರತ್ತು ನಡೆಸುತ್ತಿರುವ ಬಿಜೆಪಿ, ಅನ್ಯಪಕ್ಷಗಳ ಶಾಸಕರನ್ನು ಕರೆತರುವುದಕ್ಕೆ ಪಕ್ಷದ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಶಾಸಕರಾದ ಭೆರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಆರ್.ಶಂಕರ್, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ ಸೇರಿದಂತೆ ಮತ್ತಿತರರನ್ನು ಬಿಜೆಪಿಗೆ ಕರೆತಂದಿರುವುದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಭೆರತಿ ಬಸವರಾಜ್ ಅವರನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ಮಾಜಿ ಶಾಸಕ ನಂದೀಶ್ ರೆಡ್ಡಿ, ಸ್ಥಳೀಯ ಬಿಬಿಎಂಪಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಬಿ.ಎಸ್.ಯಡಿಯೂರಪ್ಪನವರಿಗೆ ದೂರು ನೀಡಿದ್ದಾರೆ.
ಕಳೆದ ಎರಡು ಚುನಾವಣೆಯಲ್ಲಿ ಭೆರತಿ ಬಸವರಾಜ್ ವಿರುದ್ಧ ನಾವು ಪ್ರಾಣವನ್ನು ಲೆಕ್ಕಿಸದೆ ಹೋರಾಟ ನಡೆಸಿದ್ದೇವೆ. ಅವರು ಮತ್ತು ಬೆಂಬಲಿಗರು ಕ್ಷೇತ್ರದಲ್ಲಿ ಸಾಕಷ್ಟು ಕಿರುಕುಳ ನೀಡಿದ್ದರೂ ಪಕ್ಷಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದೇವೆ. ಈಗ ಅಧಿಕಾರದ ಆಸೆಗಾಗಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ನಿಷ್ಠಾವಂತರು ಎಲ್ಲಿಗೆ ಹೋಗಬೇಕೆಂದು ಕೆ.ಆರ್.ಪುರಂನ ಪದಾಧಿಕಾರಿಗಳು ಬಿಎಸ್ವೈಗೆ ಪ್ರಶ್ನೆ ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ, ಶಾಸಕ ಮುನಿರತ್ನ ಬೆಂಬಲಿಗರ ನಿವಾಸದಲ್ಲಿ ಪತ್ತೆಯಾಗಿತ್ತು. ಅವರ ವಿರುದ್ಧವೂ ನಾವು ಕಾನೂನು ಹೋರಾಟ ನಡೆಸಿದ್ದೆವು.ಅಲ್ಲದೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೆವು.
ಆರ್.ಆರ್.ನಗರದಲ್ಲಿ ಮುನಿರತ್ನ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಏಕಾಏಕಿ ಯಾರನ್ನೂ ಲೆಕ್ಕಿಸದೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ ಕಾರ್ಯಕರ್ತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಾವು ಮುಂಗೂಸಿಯಂತಿದ್ದವರು ಈಗ ಹೊಂದಿಕೊಂಡು ಹೋಗುವುದಾದರೂ ಹೇಗೆ ಎಂಬ ತಾರ್ಕಿಕ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಇನ್ನು ಮಹಾಲಕ್ಷ್ಮಿ ಲೇಔಟ್ನಲ್ಲಿ ಗೋಪಾಲಯ್ಯ ಬಿಜೆಪಿ ಸೇರ್ಪಡೆಗೂ ಸ್ಥಳೀಯ ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿಲ್ಲವಾದರೂ ಒಳಗೊಳಗೆ ಮುಖಂಡರು ಅಸಮಾಧಾನಗೊಂಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಬಿಜೆಪಿ ಸೇರ್ಪಡೆಗೂ ವಿರೋಧ ಕಂಡುಬಂದಿದೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಲ್ಲೆಯಿಂದ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ. ಮಾಜಿ ಸಚಿವ ಸಿ.ಎಂ.ಉದಾಸಿ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಮತ್ತಿತರ ಕಣ್ಣು ಕೆಂಪಾಗಿದೆ.
ರಾಣಿಬೆನ್ನೂರು ಶಾಸಕ ಆರ್.ಶಂಕರ್ ಕೂಡ ನಿನ್ನೆ ಮುಂಬೈಗೆ ತೆರಳಿ ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದು ಹೇಳಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆರ್.ಶಂಕರ್ಗೆ ಸಂಪುಟದಲ್ಲಿ ಸ್ಥಾನ ನೀಡಿದರೆ ಜಿಲ್ಲೆಯಲ್ಲಿರುವ ಹಿರಿಯರು ಸುಮ್ಮನೆ ಕೂರಬೇಕಾಗುತ್ತದೆ ಎಂದು ಪ್ರಶ್ನೆಸಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅಂಜಲಿ ನಿಂಬಾಳ್ಕರ್ ಸೇರ್ಪಡೆಗೂ ವಿರೋಧ ಕಂಡುಬಂದಿದೆ. ಹೀಗಾಗಿ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ ನೋಂದಣಿಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.ಹೀಗೆ ಬಹುತೇಕ ಕಡೆ ಅನ್ಯ ಪಕ್ಷಗಳ ಮುಖಂಡರನ್ನು ಕರೆತರುವುದಕ್ಕೆ ಸ್ವಪಕ್ಷೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.