ಅತೃಪ್ತ ಶಾಸಕರಿಗೆ ಕೊನೆಯ ಎಚ್ಚರಿಕೆ ನೀಡಿದ ಕಾಂಗ್ರೇಸ್

ಬೆಂಗಳೂರು, ಜು.9- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್‍ನ ಅತೃಪ್ತರಿಗೆ ಕೊನೆಯ ಎಚ್ಚರಿಕೆ ನೀಡಲಾಗಿದ್ದು, ತಕ್ಷಣವೇ ವಾಪಸ್ ಬಂದು ರಾಜೀನಾಮೆ ಹಿಂಪಡೆಯದಿದ್ದರೆ ಪಕ್ಷಾಂತರ ಕಾಯ್ದೆಯಡಿ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಮತ್ತು ಆರು ವರ್ಷ ಚುನಾವಣೆ ನಿಷೇಧಗೊಳ್ಳುವ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇಂದು ವಿಧಾನಸೌಧ ಮತ್ತು ವಿಕಾಸಸೌಧ ನಡುವಿನ ಮಹಾತ್ಮಗಾಂಧಿ ಪ್ರತಿಮೆ ಎದುರು ಒಂದು ಗಂಟೆ ಬಿಜೆಪಿ ವಿರುದ್ಧ ಧರಣಿ ನಡೆಸಿದ ನಂತರ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದರು.

ಪಕ್ಷಾಂತರ ನಿಷೇಧ ಕಾಯ್ದೆ ಅನುಚ್ಛೇದ 10ರ ಅಡಿ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗುವುದು.

ಷೆಡ್ಯೂಲ್ 10ರ ಅನುಸಾರ ಯಾವುದೇ ಪಕ್ಷದ ಚಿಹ್ನೆಯಡಿ ಆಯ್ಕೆಯಾದ ಶಾಸಕ ಸ್ವಯಂ ಪ್ರೇರಿತವಾಗಿ ಅಥವಾ ನಿರ್ದಿಷ್ಟ ಕಾರಣಗಳನ್ನು ಇಟ್ಟುಕೊಂಡು ರಾಜೀನಾಮೆ ನೀಡುವ ಅಧಿಕಾರ ಹೊಂದಿದ್ದಾರೆ. ಅದರ ಬದಲು ಬೇರೆ ರೀತಿಯ ಪ್ರಲೋಭನೆ ಅಥವಾ ಒತ್ತಡಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಕಾನೂನು ಬಾಹಿರವಾಗುತ್ತದೆ.

ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯ ಒತ್ತಡಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಮುಂದಿನ ಆರು ವರ್ಷ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕೆಂದು ನಾವು ಸ್ಪೀಕರ್ ಅವರಿಗೆ ಜಂಟಿಯಾಗಿ ದೂರು ನೀಡುತ್ತೇವೆ ಎಂದರು.

ಆರ್ಟಿಕಲ್ 10ರ ಅನುಸಾರ ಮತ್ತು ಸೆಕ್ಷನ್ 164 ಪರಿಚ್ಛೇದ 1 ಮತ್ತು 2ರ ಅನುಸಾರ ಅನರ್ಹಗೊಂಡರೆ ಸದರಿ ಶಾಸಕರು ಸಚಿವ ಸ್ಥಾನವನ್ನಾಗಲಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ. ಈ ಕಾನೂನಿನಡಿ ಕ್ರಮ ಕೈಗೊಳ್ಳಲು ಸಂವಿಧಾನ ಸ್ಪೀಕರ್ ಅವರಿಗೆ ಪರಮಾಧಿಕಾರ ನೀಡಿದೆ. ಸ್ಪೀಕರ್ ಅವರು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅರಿವಿದ್ದಂತೆ ಇಲ್ಲ. ಈಗಲಾದರೂ ವಾಪಸ್ ಬಂದು ರಾಜೀನಾಮೆಯನ್ನು ಹಿಂಪಡೆಯಿರಿ. ಇಲ್ಲವಾದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಇಂದಿನ ಶಾಸಕಾಂಗ ಸಭೆಯಲ್ಲಿ ವಿಧಾನಮಂಡಲ ಅಧಿವೇಶನದ ಬಗ್ಗೆ ಚರ್ಚೆನಡೆಸಲಾಗಿದೆ. ಬೇಡಿಕೆಗಳ ಮೇಲೆ ಚರ್ಚೆ ನಡೆದು ನಾಲ್ಕು ತಿಂಗಳ ಲೇಖಾನುಧಾನಕ್ಕೆ ಈ ಮೊದಲು ಒಪ್ಪಿಗೆ ಪಡೆಯಲಾಗಿತ್ತು. ಮುಂದಿನ 8 ತಿಂಗಳ ಕಾಲ ಹಣಕಾಸು ಮಸೂದೆಗೆ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ ಜುಲೈ 12ರಿಂದ ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನ ಪ್ರಮುಖವಾದದ್ದು, ಎಲ್ಲಾ ಶಾಸಕರು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಯಾವುದೇ ಕೆಲಸಗಳಿದ್ದರೂ ಬಿಟ್ಟು ಅಧಿವೇಶನಕ್ಕೆ ಹಾಜರಾಗಿ ಎಂದು ಸೂಚನೆ ನೀಡುತ್ತಿರುವುದಾಗಿ ಸಿದ್ದರಾಮಯ್ಯ ಹೇಳಿದರು.

ಸಮ್ಮಿಶ್ರ ಸರ್ಕಾರ ರಚನೆಯಾಗಿ 20ತಿಂಗಳ ನಂತರ ಸಂಪುಟ ಪುನರ್‍ಚಿಸಲು ನಿರ್ಧರಿಸಲಾಗಿತ್ತು. ಕೆಲವು ಹಿರಿಯ ಶಾಸಕರಿಗೆ, ಅರ್ಹರಿಗೆ ಅವಕಾಶ ನೀಡರಲಿಲ್ಲ. ಹೀಗಾಗಿ ಮತ್ತೆ ಸಂಪುಟ ಪುನರ್‍ಚಿಸಲು ನಿರ್ಧರಿಸಲಾಗಿದೆ. ಹೊಸಬರಿಗೆ ಅವಕಾಶ ಮಾಡಿಕೊಡಲು ಸಂಪುಟದಲ್ಲಿರುವ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ನಿನ್ನೆ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದರು ಎಂಬ ಮಾತ್ರಕ್ಕೆ ಸಚಿವರು ಮಾಜಿಗಳಾಗಿಲ್ಲ. ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರ ಕಳುಹಿಸಿ ಅದು ಅಂಗೀಕಾರಗೊಳ್ಳುವವರೆಗೂ ಮಂತ್ರಿ ಮಂಡಲವೂ ಅಸ್ಥಿತ್ವದಲ್ಲಿರುತ್ತದೆ. ಸರ್ಕಾರವೂ ಚಾಲ್ತಿಯಲ್ಲಿರುತ್ತದೆ ಎಂದು ಸಿದ್ದರಾಮಯ್ಯ ಪ್ರತಿ ಪಾದಿಸಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಶೇ.38, ಬಿಜೆಪಿಗೆ 37, ಜೆಡಿಎಸ್‍ಗೆ 19ರಷ್ಟು ಮತಗಳು ಬಿದ್ದಿದ್ದವು. ಬಿಜೆಪಿಗಿಂತಲೂ ಕಾಂಗ್ರೆಸ್ ಶೇ.1ರಷ್ಟು ಮತ ಗಳಿಸಿತ್ತು.ಜೆಡಿಎಸ್-ಕಾಂಗ್ರೆಸ್ ಸೇರಿದಂತೆ ಶೇ.52ರಷ್ಟು ಮತಗಳಿಕೆಯಾಗುತ್ತದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ಆನಂತರ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಟ್ಟಾಗಿ ಸಮ್ಮಿಶ್ರ ಸರ್ಕಾರ ರಚಿಸಿವೆ.

ಒಂದು ವರ್ಷದ ಆಡಳಿತದಲ್ಲಿ ಬಿಜೆಪಿ ಐದು ಬಾರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿ ವಿಫಲವಾಗಿದೆ. ಈ ಬಾರಿ ರಾಜ್ಯ ಬಿಜೆಪಿ ನಾಯಕರ ಜತೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಸಂವಿಧಾನ ಬಾಹಿರವಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹಣಬಲ ಹಾಗೂ ರಾಜಕೀಯ ಬಲವನ್ನು ಬಳಸುತ್ತಿದ್ದಾರೆ.

ಆಪರೇಷನ್ ಕಮಲಕ್ಕೆ ಬಳಕೆಯಾಗುತ್ತಿರುವ ಹಣ ಕಾನೂನು ಬದ್ಧವೋ ಅಲ್ಲವೋ ಎಂಬುದನ್ನು ಬಿಜೆಪಿ ತಿಳಿಸಬೇಕು ಮತ್ತು ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಕೊಟ್ಟವರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ