
ಬೆಂಗಳೂರು, ಜು.9- ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ವಿಕೆಟ್ ಪತನವಾಗಿದ್ದು ಕಾಂಗ್ರೆಸ್ನ ಹಿರಿಯ ನಾಯಕ ರೋಷನ್ ಬೇಗ್ ರಾಜೀನಾಮೆ ನೀಡಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಸ್ಪೀಕರ್ ಕಚೇರಿಗೆ ಆಗಮಿಸಿದ ಅವರು, ರಾಜೀನಾಮೆ ಸಲ್ಲಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿ ಮಾಡಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ಮುಂಬೈಗೂ ಹೋಗುವುದಿಲ್ಲ. ಗೋವಾಕ್ಕೂ ಹೋಗುವುದಿಲ್ಲ. ರಾಜ್ಯ ಸರ್ಕಾರದ ಹಜ್ಕಮಿಟಿಯ ಅಧ್ಯಕ್ಷನಾಗಿದ್ದೇನೆ. ಸುಮಾರು ಮೂರು ವಿಮಾನಗಳಲ್ಲಿ ಹಜ್ ಯಾತ್ರಿಕರು ಇಂದು ತೆರಳುತ್ತಿದ್ದಾರೆ. ಅವರನ್ನು ಕಳುಹಿಸಿಕೊಡುವುದರಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸೇರುವ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಲಿಲ್ಲ. ರೋಷನ್ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 104ಗೆ ಕುಸಿದಿದೆ.
ಈ ಮೊದಲ ಹಂತದಲ್ಲಿ ಶಾಸಕ ರಾದ ಆನಂದ್ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದರು. ಎರಡನೇ ಹಂತದಲ್ಲಿ ಕಾಂಗ್ರೆಸ್ನ ಬಿ.ಸಿ.ಪಾಟೀಲ್, ಪ್ರತಾಪ್ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕಮಟಳ್ಳಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದರು.
ರಮೇಶ್ ಜಾರಕಿಹೊಳಿ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಿದರು. ಜೆಡಿಎಸ್ನ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಅವರು ಸೇರಿ ಒಟ್ಟು 12 ಮಂದಿ ಕಳೆದ ಶನಿವಾರ ರಾಜೀನಾಮೆ ನೀಡಿದ್ದು, ಅವರಲ್ಲಿ ರಾಮಲಿಂಗಾರೆಡ್ಡಿ ಹೊರತು ಪಡಿಸಿ ಉಳಿದ ಎಲ್ಲರೂ ಮುಂಬೈನ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದಾರೆ.
ಪಕ್ಷದ ನಾಯಕರಾದ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ದಿನೇಶ್ಗುಂಡೂರಾವ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಈ ಮೊದಲು ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿತ್ತು.
ಸಂಖ್ಯಾಬಲ ಕುಗ್ಗುತ್ತಿರುವ ಸಂದರ್ಭದಲ್ಲಿ ರೋಷನ್ಬೇಗ್ ಅವರನ್ನು ಮನವೊಲಿಸಲು ಪ್ರಯತ್ನಿಸಬಹುದಾಗಿತ್ತಾದರೂ ಕಾಂಗ್ರೆಸ್ ನಾಯಕರು ಆ ಕೆಲಸ ಮಾಡಲಿಲ್ಲ. ಹೀಗಾಗಿ ಖುದ್ದಾಗಿ ರೋಷನ್ ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಪೀಕರ್ ಸೇರಿ ಒಟ್ಟು 118ಸಂಖ್ಯಾಬಲ ಹೊಂದಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದಾಗಿ ಸಂಖ್ಯಾಬಲ 104ಕ್ಕೆ ಕುಸಿದಿದೆ.