ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು ಅಸಾಧ್ಯ

ಬೆಂಗಳೂರು,ಜು.8-ಸಂಕಷ್ಟಕ್ಕೀಡಾಗಿರುವ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೆಡಿಎಸ್-ಕಾಂಗ್ರೆಸ್ ಪಕ್ಷದ ನಾಯಕರು ಕೊನೆಗೂ ಕೈ ಚೆಲ್ಲಿದ್ದಾರೆ.

ಇಂದು ಸಂಜೆಯೊಳಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿದೇಶದಿಂದ ಮರಳಿದ ಬಳಿಕ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.

ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಪ್ರತ್ಯೇಕವಾಗಿ ತಮ್ಮದೇ ಆದ ರಣವೀಳ್ಯದೊಂದಿಗೆ ಚಟುವಟಿಕೆ ನಡೆಸಿದವು. ಆದರೆ ನಿರೀಕ್ಷಿತ ಫಲ ನೀಡಲಿಲ್ಲ.

ಈಗಾಗಲೇ ರಾಜೀನಾಮೆ ನೀಡಿ ಮುಂಬೈನಲ್ಲಿರುವ 10 ಮಂದಿ ಶಾಸಕರನ್ನು ವಾಪಸ್ ಕರೆತರಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಅಲ್ಲಿನ ಶಾಸಕರು ಯಾವುದೇ ಕಾರಣಕ್ಕೂ ಬರುವುದಿಲ್ಲ. ನಮ್ಮ ನಿರ್ಧಾರ ಅಚಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಇಂದು ಡಿಸಿಎಂ ಗೃಹಕಚೇರಿಯಲ್ಲಿ ನಡೆದ ಉಪಹಾರ ಕೂಟದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇಲ್ಲಿಂದಲೇ ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನಗಳು ಆಗಿವೆ. ಆದರೆ ಅದು ಯಶಸ್ವಿಯಾಗಿಲ್ಲ.

ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರ ಮಾತಿಗೂ ಅತೃಪ್ತ ಶಾಸಕರು ಕಿವಿಗೊಟ್ಟಿಲ್ಲ.

ಸುಮಾರು ಎರಡು ಗಂಟೆ ಕಾಲ ನಡೆದ ಕಸರತ್ತು ಪ್ರಯೋಜನಕ್ಕೆ ಬಾರದ ಕಾರಣ ಅಂತಿಮವಾಗಿ ಕಾಂಗ್ರೆಸ್ ಕೈ ಚೆಲ್ಲಿದ್ದು, ರಾಜೀನಾಮೆ ನೀಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಈ ನಡುವೆ ಕಾಂಗ್ರೆಸ್‍ನ ಎಲ್ಲ ಸಚಿವರಿಂದಲೂ ರಾಜೀನಾಮೆ ಪಡೆದು ಅತೃಪ್ತರಿಗೆ ಸ್ಥಾನ ನೀಡುವ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್‍ನ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ರಾಣಿಬೆನ್ನೂರಿನ ಆರ್.ಶಂಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ಇತ್ತೀಚೆಗಷ್ಟೇ ಸಚಿವನಾಗಿದ್ದೇನೆ. ಈಗಲೇ ರಾಜೀನಾಮೆ ಕೊಡಿ ಎಂದರೆ ನನ್ನಿಂದ ಸಾಧ್ಯವಿಲ್ಲ ಎಂದಾಗ ಡಿ.ಕೆ.ಶಿವಕುಮಾರ್ ಅವರು, ಈ ಮಾತುಗಳು ಅರ್ಥವಾಗುತ್ತದೆ. ನಮ್ಮಲ್ಲಿರುವ ಬಹಳಷ್ಟು ಸಚಿವರೇ ರಾಜೀನಾಮೆಗೆ ಸಿದ್ಧರಿದ್ದಾರೆ. ನಾವು ಇನ್ನೂ ವಿಳಂಬ ಮಾಡಿದರೆ ಕೆಲವು ಸಚಿವರು ಕೂಡ ಪಕ್ಷ ತೊರೆದು ಹೋಗಬಹುದು ಎಂಬ ಆಂತಕವನ್ನು ವ್ಯಕ್ತಪಡಿಸಿದ್ದಾರೆ.

ಸ್ವಲ್ಪ ದಿನದ ನಂತರ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ರಾಜೀನಾಮೆ ನಿರ್ಧಾರವನ್ನು ಒಪ್ಪಿಕೊಳ್ಳಿ ಎಂದು ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್ ಮತ್ತಿತರ ನಾಯಕರು ಮನವಿ ಮಾಡಿದರೂ ಆರ್.ಶಂಕರ್ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ನಾನು ಪಕ್ಷೇತರ ಶಾಸಕ ಯಾವುದೇ ನಿರ್ಧಾರ ಕೈಗೊಳ್ಳಲು ನನ್ನ ಸ್ವತಂತ್ರವಿದೆ. ನನ್ನ ಮೇಲೆ ಒತ್ತಡ ಹೇರಬೇಡಿ ಎಂದು ಖಡಕ್ಕಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ