ಬೆಂಗಳೂರು,ಜು.8- ಇತ್ತೀಚೆಗಷ್ಟೇ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೋಸ್ತಿ ಸರ್ಕಾರಕ್ಕೆ ಮರ್ಮಾಘಾತ ನೀಡಿದ್ದಾರೆ.
ಈಗಾಗಲೇ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ. ಈ ಬೆಳವಣಿಗೆಗಳ ನಡುವೆಯೇ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಎಚ್.ನಾಗೇಶ್ ಇಂದು ದಿಢೀರನೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ನಾಗೇಶ್ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅಲ್ಲದೆ ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿರುವ ಅವರು ನೇರವಾಗಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದನ್ನು ದೋಸ್ತಿ ಪಕ್ಷಗಳ ಮುಖಂಡರು ಕನಸಿನಲ್ಲೂ ಕೂಡ ಊಹೆ ಮಾಡಿರಲಿಲ್ಲ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಗುರುತಿಸಿಕೊಂಡಿದ್ದ ಅವರು ಸರ್ಕಾರದಲ್ಲಿ ಉಳಿಯುತ್ತಾರೆ ಎಂಬ ನಂಬಿಕೆ ಬಲವಾಗಿತ್ತು.
ಜೂ.14ರಂದು ಸಂಪುಟಕ್ಕೆ ಸೇರ್ಪಡೆಯಾಗಿದ್ದ ಎಚ್.ನಾಗೇಶ್ ಮತ್ತು ಆರ್.ಶಂಕರ್‍ಗೆ ಹತ್ತು ದಿನವಾದರೂ ಖಾತೆಗಳನ್ನೇ ನೀಡಿರಲಿಲ್ಲ. ಇದು ಇಬ್ಬರಿಗೂ ತೀವ್ರ ಮುಜುಗರ ತಂದಿತ್ತು.
ನಂತರ ನಾಗೇಶ್‍ಗೆ ಸಣ್ಣ ನೀರಾವರಿ, ಆರ್.ಶಂಕರ್‍ಗೆ ಪೌರಾಡಳಿತ ಖಾತೆಯನ್ನು ನೀಡಲಾಗಿತ್ತು.ಇದೀಗ ನಾಗೇಶ್ ರಾಜೀನಾಮೆ ನೀಡಿ ಅತೃಪ್ತರ ಬಣ ಸೇರಿಕೊಳ್ಳಲು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
ಈಗಾಗಲೇ 13 ಮಂದಿ ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಬಲ 105ಕ್ಕೆ ಕುಸಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಯಬೇಕೆಂದರೆ ಪವಾಡವೇ ನಡೆಯಬೇಕಾಗಿದೆ.