ಬೆಂಗಳೂರು,ಜು.8- ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ರಿವರ್ಸ್ ಆಪರೇಷನ್ ಸೇರಿದಂತೆ ಎಲ್ಲಾ ರೀತಿಯ ತಂತ್ರಗಾರಿಕೆ ಬಳಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ತುರ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಎಲ್ಲ ಶಾಸಕರು ತಪ್ಪದೇ ಭಾಗವಹಿಸುವಂತೆ ರಾಜ್ಯಧ್ಯಕ್ಷರು ಸೂಚಿಸಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮುಖಂಡರು, ಬಿಜೆಪಿಯಲ್ಲಿರುವ ಕೆಲವು ಅತೃಪ್ತ ಶಾಸಕರಿಗೆ ರಿವರ್ಸ್ ಅಪರೇಷನ್ ನಡೆಸಲು ಮುಂದಾಗಿರುವ ಹಿನ್ನಲೆಯಲ್ಲಿ ಯಾರೊಬ್ಬರು ಚದುರದಂತೆ ಹಿಡಿದಿಟ್ಟುಕೊಳ್ಳಲು ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಸರ್ಕಾರ ಪತನದತ್ತ ಸಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಮುಂದಿನ ನಡೆಯ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲು ಬಿಜೆಪಿ ನಿರ್ಧರಿಸಿದೆ.
ಸಂಜೆ 5 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು ಎಲ್ಲಾ ಶಾಸಕರು ಸಭೆಗೆ ಹಾಜರಾಗುವಂತೆ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಸುನಿಲ್‍ಕುಮಾರ್ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆ ಬಳಿಕ ಬಿಜೆಪಿಯ 105 ಶಾಸಕರನ್ನು ಯಲಹಂಕದ ರುಮಡಾ ರೆಸಾರ್ಟ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೂಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೈತ್ರಿ ಪಕ್ಷದಿಂದ ಬಿಜೆಪಿ ಶಾಸಕರನ್ನು ರಕ್ಷಣೆ ಮಾಡೋದು, ಶಾಸಕರ ರಾಜೀನಾಮೆ ಹಿನ್ನೆಲೆ ಬಿಜೆಪಿ ಕೈಗೊಳ್ಳಬಹುದಾದ ನಿರ್ಧಾರಗಳು, ರಾಜ್ಯಪಾಲರ ಭೇಟಿ ಸಾಧ್ಯತೆ, ಒಂದು ವೇಳೆ ಸರ್ಕಾರ ಪತನವಾದರೆ ತಕ್ಷಣಕ್ಕೆ ಬಿಜೆಪಿಯ ಪ್ರತಿಕ್ರಿಯೆ ಏನಾಗಿರಬೇಕು ಎಂಬುದರ ಕುರಿತು ಶಾಸಕಾಂಗ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮುಂಜಾಗ್ರತಾ ಕ್ರಮವಾಗಿ ಯಲಹಂಕದಲ್ಲಿರುವ ರುಮಾಡಾ ಹೋಟೆಲ್‍ನಲ್ಲಿ 30 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ಅಗತ್ಯವಿದ್ದಲ್ಲಿ ರಿವರ್ಸ್ ಆಪರೇಷನ್ ಭೀತಿ ಇರುವ ಅಥವಾ ಮೈತ್ರಿ ಪಕ್ಷಗಳ ನಾಯಕರು ಸಂಪರ್ಕಕ್ಕೆ ಯತ್ನಿಸುತ್ತಿರುವ ಶಾಸಕರನ್ನು ಹೋಟೆಲ್‍ಗೆ ಕಳಿಸುವ ಕುರಿತೂ ನಿರ್ಧಾರ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಗತ್ಯವಿದ್ದರೆ ಮಾತ್ರ ಶಾಸಕರನ್ನು ಹೋಟೆಲ್‍ಗೆ ಕಳಿಸೋಣ ಅನಗತ್ಯವಾಗಿ ರೆಸಾರ್ಟ್ ರಾಜಕಾರಣದ ಅಪವಾದಕ್ಕೆ ಸಿಲುಕುವುದು ಬೇಡ ಎಂದು ನಿರ್ಣಯಿಸಲಾಗಿದ್ದು, ಕೈ ನಾಯಕರನ್ನು ಕಟ್ಟಿಹಾಕುವ ಕುರಿತು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಈಗಾಗಲೇ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್‍ಗೆ ಹೋಗಿದ್ದು, ಬಿಜೆಪಿ ಶಾಸಕರನ್ನೂ ಹೋಟೆಲ್‍ಗೆ ಕಳುಹಿಸಿದರೆ ರೆಸಾರ್ಟ್ ರಾಜಕಾರಣದ ಅಪವಾದ ಬರಲಿದೆ ಎನ್ನುವ ಕಾರಣಕ್ಕೆ ಸದ್ಯಕ್ಕೆ ಕಾದು ನೋಡಿ, ಶಾಸಕಾಂಗ ಸಭೆಯ ನಂತರ ಈ ಬಗ್ಗೆ ನಿರ್ಧರಿಸೋಣ ಎಂದು ಯಡಿಯೂರಪ್ಪ ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸವಿಸ್ತಾರವಾದ ಚರ್ಚೆ ನಡೆಸಿ ಪಕ್ಷದ ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಆಪ್ತರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಡಾಲರ್ಸ್ ಕಾಲೋನಿಯ ಬಿಎಸ್‍ವೈ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಸುನೀಲ್ ಕುಮಾರ್, ರೇಣುಕಾಚಾರ್ಯ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಚ್ಚೇಗೌಡ ಭಾಗಿಯಾಗಿದ್ದರು.