ಬೆಂಗಳೂರು,ಜು.8- ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಸಚಿವರುಗಳ ರಾಜೀನಾಮೆ ಪತ್ರ ಪಡೆದುಕೊಳ್ಳಲಾಗಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಕೆಲವು ಶಾಸಕರು ಮುಂಬೈಗೆ ತೆರಳಿದ್ದಾರೆ. ಅವರ ಪೈಕಿ ಕೆಲವರು ಸಚಿವ ಸ್ಥಾನ ಕೊಟ್ಟರೆ ತಾವು ಕಾಂಗ್ರೆಸ್ನಲ್ಲೇ ಉಳಿಯುವುದಾಗಿ ಭರವಸೆ ನೀಡಿದ್ದು, ಅವರ ಮನವೊಲಿಕೆ ಪ್ರಯತ್ನ ನಡೆದಿದೆ.
ಹಾಲಿ ಸಚಿವರ ಪೈಕಿ ಕೆಲವರಿಂದ ರಾಜೀನಾಮೆ ಪಡೆದು ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಅತೃಪ್ತ ಶಾಸಕರಿಗೆ ಅವಕಾಶ ನೀಡಿ ಸರ್ಕಾರವನ್ನು ರಕ್ಷಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.
ನಿನ್ನೆ ತಡರಾತ್ರಿವರೆಗೂ ನಡೆದ ಜೆಡಿಎಸ್ -ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕಾಂಗ್ರೆಸ್ನಿಂದ ಕನಿಷ್ಠ 5ರಿಂದ 10 ಮಂದಿ , ಜೆಡಿಎಸ್ನಿಂದ ಕನಿಷ್ಟ 5 ಮಂದಿ ಸಚಿವರ ರಾಜೀನಾಮೆ ಪಡೆಯುವುದು, ಆ ಸ್ಥಾನಕ್ಕೆ ಅತೃಪ್ತರನ್ನು ನೇಮಿಸಿ ಪರಿಸ್ಥಿತಿಯನ್ನು ತಹಬದಿಗೆ ತರುವ ನಿರ್ಧಾರವಾಗಿದೆ.
ಹೀಗಾಗಿ ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮನೆಯಲ್ಲಿ ಕಾಂಗ್ರೆಸ್ನ ಎಲ್ಲ ಸಚಿವರಿಗೆ ದಿಢೀರ್ ಉಪಹಾರ ಕೂಟ ಆಯೋಜಿಸಲಾಗಿದೆ.
ಉಪಹಾರ ಕೂಟಕ್ಕೆ ಬರುವ ಎಲ್ಲ ಸಚಿವರು ತಮ್ಮ ರಾಜೀನಾಮೆ ಪತ್ರಗಳೊಂದಿಗೆ ಆಗಮಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಎಲ್ಲ ಸಚಿವರು ರಾಜೀನಾಮೆ ನೀಡಿ ಸಂದರ್ಭನುಸಾರ ನಡೆದುಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಿ ಎಂದು ಸಿದ್ದರಾಮಯ್ಯ ಸೂಚಿಸಿದ್ದರು.
ಅದರಂತೆ ಕಾಂಗ್ರೆಸ್ನ ಬಹುತೇಕ ಸಚಿವರು ಇಂದು ಉಪಾಹಾರ ಕೂಟದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇನ್ನು ಕೆಲವು ಸಚಿವರು ನಮ್ಮನ್ನು ಸಂಪುಟದಿಂದ ಕೈಬಿಡುವುದಾದರೆ ಅದನ್ನು ವಿರೋಧಿಸುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಈಗ ಅತೃಪ್ತರಾಗಿರುವವರನ್ನು ಸಮಾಧಾನಪಡಿಸಲು ಸಚಿವ ಸ್ಥಾನ ಕೊಡುವುದು ಸರಿ. ನಾವು ಅದಕ್ಕಾಗಿ ರಾಜೀನಾಮೆ ಕೊಡುತ್ತೇವೆ. ಆದರೆ ಇನ್ನು ಆರು ತಿಂಗಳ ಬಳಿಕ ಇನ್ನೊಂದಷ್ಟು ಮಂದಿ ಮತ್ತೆ ಬಂಡಾಯವೆದ್ದರೆ ಆಗ ಮತ್ತೆ ಆ ಸಚಿವರಿಂದ ರಾಜೀನಾಮೆ ಕೊಡಿಸಿ ಹೊಸದಾಗಿ ಬಂಡಾಯವೆದ್ದ ಅತೃಪ್ತರಿಗೆ ನೀಡುತ್ತೀರಾ? ಈ ರೀತಿಯ ಬ್ಲಾಕ್ಮೇಲ್ ರಾಜಕಾರಣಕ್ಕೆ ಮಣೆ ಹಾಕುತ್ತಾ ಹೋದರೆ ಎಷ್ಟು ದಿನ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ವರ್ಷಕ್ಕೊಮ್ಮೆ ಮೇಯರ್ ಬದಲಾದಂತೆ ಸಚಿವರು ಬದಲಾಗುತ್ತಾ ಹೋದರೆ ಆಡಳಿತ ಸುಭದ್ರವಾಗಿರುವುದಾದರೂ ಹೇಗೆ?ಅಭಿವೃದ್ಧಿಯಾದರೂ ಹೇಗೆ ಸಾದ್ಯ ಎಂದು ಕೆಲವು ಸಚಿವರು ಆಕ್ಷೇಪವೆತ್ತಿದ್ದಾರೆ.
ಅತೃಪ್ತರನ್ನು ಮನವೊಲಿಸಲು ಪರ್ಯಾಯ ಮಾರ್ಗ ನೋಡಬೇಕಿದೆ. ಸಚಿವರ ರಾಜೀನಾಮೆ, ಸಂಪುಟ ಪುನರ್ ರಚನೆ ಒಂದೇ ಮಾರ್ಗವಲ್ಲ. ಈ ಮೊದಲು ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡುವ ಬದಲು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೆ ಅಸಮಾಧಾನ ಭುಗಿಲೇಳು ಕಾರಣವಾಗಿದೆ. ಆ ಸಂದರ್ಭದಲ್ಲಿ ನಮ್ಮ ಅಭಿಪ್ರಾಯವನ್ನು ಹಿರಿಯ ನಾಯಕರು ಪರಿಗಣಿಸಲಿಲ್ಲ.
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ರಾಜೀನಾಮೆ ಕೇಳುತ್ತಿದ್ದೀರಾ?ನಿರ್ಧಾರ ತೆಗೆದುಕೊಳ್ಳುವುದು ನೀವು, ಅದಕ್ಕೆ ಶಿಕ್ಷೆ ಅನುಭವಿಸಬೇಕಿರುವುದು ನಾವು ಎಂದು ಸಚಿವರುಗಳು ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ಇದರಿಂದ ಸಿಟ್ಟಾದ ಹಿರಿಯ ನಾಯಕರು ಸಚಿವರಾದವರು ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸಚಿವ ಸ್ಥಾನ ಸಿಕ್ಕ ಮೇಲೆ ಕೇವಲ ನಿಮ್ಮ ಅಭಿವೃದ್ದಿಗಷ್ಟೇ ಗಮನ ಕೊಟ್ಟಿದ್ದೀರಿ. ರಾಜಕೀಯ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಲಿಲ್ಲ. ಅತೃಪ್ತ ಶಾಸಕರ ಚಟುವಟಿಕೆಗಳೇನು? ಬಿಜೆಪಿ ನಾಯಕರು ಅವರನ್ನು ಸಂಪರ್ಕಿಸಿ ಆಮಿಷವೊಡ್ಡುತ್ತಿದ್ದಾರೆ, ಶಾಸಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ವಿಷಯಗಳ ಬಗ್ಗೆ ಸಚಿವರು ನಿಗಾ ವಹಿಸಿದ್ದರೆ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು.ಶಾಸಕರು ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
ಇತ್ತ ಅಭಿವೃದ್ದಿಯ ಕಡೆಯೂ ಗಮನ ಕೊಡಲಿಲ್ಲ. ಅತ್ತ ರಾಜಕೀಯವಾಗಿಯೂ ಎಚ್ಚರದಿಂದರಲಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಲ್ಲಂತೂ ಸಚಿವರ ಕೊಡುಗೆ ಶೂನ್ಯ.ಅಧಿಕಾರ ಬಿಟ್ಟುಕೊಡುವಾಗ ಮಾತ್ರ ಅಸಮಾಧಾನದ ಮಾತುಗಳನ್ನಾಡುತ್ತೀರ ಎಂದು ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.