ಬೆಂಗಳೂರು,ಜು.6- ರಾಜ್ಯ ರಾಜಕಾರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಸಮಾಧಾನಗೊಂಡಿದ್ದ ದೋಸ್ತಿ ಪಕ್ಷದ 8 ಮಂದಿ ಭಿನ್ನಮತೀಯ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಪತನಕ್ಕೊಳಗಾಗುವ ಸಾಧ್ಯತೆಯಿದೆ.
ಬಿ.ಸಿ.ಪಾಟೀಲ್(ಹಿರೇಕೆರೂರು), ಪ್ರತಾಪ್ಗೌಡ ಪಾಟೀಲ್(ಮಸ್ಕಿ), ರಮೇಶ್ ಜಾರಕಿಹೊಳಿ(ಗೋಕಾಕ್), ಎಚ್.ವಿಶ್ವನಾಥ್(ಹುಣಸೂರು), ನಾರಾಯಣಗೌಡ(ಕೆ.ಆರ್.ಪೇಟೆ), ಶಿವರಾಮ್ ಹೆಬ್ಬಾರ್(ಯಲ್ಲಪುರ), ಗೋಪಾಲಯ್ಯ(ಮಹಾಲಕ್ಷ್ಮಿಲೇಔಟ್) ಅವರುಗಳು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ಇದರ ಜೊತೆಗೆ ರಾಮಲಿಂಗಾರೆಡ್ಡಿ(ಬಿಟಿಎಂ ಲೇಔಟ್), ಸೌಮ್ಯರೆಡ್ಡಿ(ಜಯನಗರ), ಎಸ್.ಟಿ.ಸೋಮಶೇಖರ್ ( ಯಶವಂತಪುರ), ಮುನಿರತ್ನ (ರಾಜರಾಜೇಶ್ವರಿ ನಗರ), ಭೆರತಿ ಬಸವರಾಜ್ (ಕೆ.ಆರ್.ಪುರ), ಬಿ.ನಾಗೇಂದ್ರ(ಬಳ್ಳಾರಿ ಗ್ರಾಮೀಣ), ರೋಷನ್ ಬೇಗ್(ಶಿವಾಜಿನಗರ), ಲಿಂಗೇಶ್(ಬೇಲೂರು) ಸೇರಿದಂತೆ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಅತೃಪ್ತರ ಬಣದಲ್ಲಿ ನಾನು ಇದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಂದಿದ್ದೇನೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಎಂದು ರಾಮಲಿಂಗರೆಡ್ಡಿ ಹೇಳಿರುವುದು ಕುತೂಹಲ ಕೆರಳಿಸಿದೆ.
ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಬೆಳಗ್ಗೆ ಮೊದಲು 8 ಮಂದಿ ಶಾಸಕರು ಆಗಮಿಸಿದರು. ಬಳಿಕ ಎಸ್.ಟಿ.ಸೋಮಶೇಖರ್, ಭೆರತಿ ಬಸವರಾಜ್, ಮುನಿರತ್ನ ಆಗಮಿಸಿದ ಮರುಕ್ಷಣವೇ ರಾಮಲಿಂಗಾರೆಡ್ಡಿ ಕೂಡ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಯತ್ತ ದೌಡಾಯಿಸಿದರು.
ಶಾಸಕರೆಲ್ಲರೂ ಆಗಮಿಸಿದ ಸಂದರ್ಭದಲ್ಲಿ ಸ್ಪೀಕರ್ ತಮ್ಮ ಕಚೇರಿಯಿಂದ ಹೊರಹೋದ ಹಿನ್ನೆಲೆಯಲ್ಲಿ ಎಲ್ಲರೂ ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ವಿಶೇಷವೆಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಬಹುತೇಕ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಾಗಿದ್ದಾರೆ.
ಇನ್ನೊಂದು ವಿಶೇಷವೆಂದರೆ ಯಾರೂ ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ಜೆಡಿಎಸ್ನ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ದಳಪತಿಗಳಿಗೆ ಮರ್ಮಾಘಾತ ನೀಡಿದಂತಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ ಅವರು ಕೂಡ ರಾಜೀನಾಮೆ ನೀಡಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ.
ಕಳೆದ ರಾತ್ರಿ ಈ ಎಲ್ಲ ಶಾಸಕರು ರಹಸ್ಯ ಸ್ಥಳವೊಂದರಲ್ಲಿ ಸಭೆ ಸೇರಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಸರ್ಕಾರದಲ್ಲಿ ಯಾವುದೇ ರೀತಿಯ ಕೆಲಸ ಆಗದಿರುವುದು, ಕ್ಷೇತ್ರಕ್ಕೆ ಅನುದಾನ ನೀಡುವಲ್ಲೂ ತಾರತಮ್ಯ, ಅಧಿಕಾರಿಗಳ ವರ್ಗಾವಣೆಯಲ್ಲೂ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೆ ಮೈತ್ರಿ ಪಕ್ಷದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಸೇರಿದಂತೆ ಮತ್ತಿತರರು ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿ ಮನವೊಲಿಸಲು ಮುಂದಾದರು.
ಆದರೆ ಆ ವೇಳೆಗಾಗಲೇ ಶಾಸಕರೆಲ್ಲರೂ ರಾಜೀನಾಮೆ ನೀಡುವ ದೃಢ ನಿರ್ಧಾರಕ್ಕೆ ಬಂದಿದ್ದು, ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖಂಡರಿಗೆ ಸ್ಪಷ್ಟಪಡಿಸಿದರು.
ಶಾಸಕರ ಮನವೊಲಿಸುವಲ್ಲಿ ವಿಫಲವಾಗಿರುವ ಮೈತ್ರಿ ಪಕ್ಷದ ಮುಖಂಡರು ಕೈ ಚೆಲ್ಲಿ ಕುಳಿತಿದ್ದು, ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.