ಕೆರೆ ಸೇರುತ್ತಿರುವ ತ್ಯಾಜ್ಯ ನೀರನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ-ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಮೇಯರ್

ಬೆಂಗಳೂರು, ಜು.5- ಸಾರಕ್ಕಿ ಕೆರೆ ಸೇರುತ್ತಿರುವ ತ್ಯಾಜ್ಯ ನೀರನ್ನು ತಡೆಗಟ್ಟಲು 15 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ ಜಲಮಂಡಳಿ ಅಧಿಕಾರಿಗಳಿಗೆ ಇಂದಿಲ್ಲಿ ಎಚ್ಚರಿಕೆ ನೀಡಿದರು. ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಎಚ್ಚರಿಕೆ ನೀಡಿದರು. ನಾವು ಕೆರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ನೀವು ತ್ಯಾಜ್ಯನೀರು ಕೆರೆ ಹರಿಸುವುದಕ್ಕಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಅವರು 15 ದಿನಗಳೊಳಗೆ ಕೆರೆ ಸುತ್ತಲೂ ಸ್ಯಾನಿಟರಿ ಪೈಪ್‍ಲೈನ್ ಅಳವಡಿಸಿ ತ್ಯಾಜ್ಯ ಕೆರೆ ಸೇರುವುದನ್ನು ತಪ್ಪಿಸಬೇಕು ಎಂದು ಸೂಚನೆ ನೀಡಿದರು.ಕೆರೆ ಭಾಗದಲ್ಲಿದ್ದ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೂ ಮೇಯರ್ ಅವರು ಆದೇಶಿಸಿದರು. ಜರಗನಹಳ್ಳಿ ಮತ್ತು ಆರ್‍ಬಿಐ ಬಡಾವಣೆಗಳಿಂದ ಕೆರೆ ಸೇರುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಜಲಮಂಡಳಿ ವತಿಯಿಂದ 8 ಎಕರೆ ಪ್ರದೇಶದಲ್ಲಿ 14.49 ಕೋಟಿ ರೂ. ವೆಚ್ಚ ಮಾಡಿ 50 ಲಕ್ಷ ಲೀಟರ್ ಸಾಮಥ್ರ್ಯದ ಎಸ್‍ಟಿಪಿ ನಿರ್ಮಾಣ ಮಾಡಲಾಗುತ್ತಿದೆ. ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡುವಂತೆ ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಹೇಳಿದರು.

2016ರಲ್ಲಿ ಬಿಡಿಎನಿಂದ ಬಿಬಿಎಂಪಿಗೆ ಹಸ್ತಾಂತರಗೊಂಡ ಸಾರಕ್ಕಿ ಕೆರೆಯನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.ಕೆರೆ ಸುತ್ತ ತಡೆಗೋಡೆ ನಿರ್ಮಿಸಿ ತಂತಿಬೇಲಿ ಅಳವಡಿಸುವುದು, ಎರಡು ಮುಖ್ಯದ್ವಾರಗಳ ನಿರ್ಮಾಣ ಕಾಮಗಾರಿ ಮುಗಿದಿದೆ.ಮಳೆ ನೀರು ಸರಾಗವಾಗಿ ಕೆರೆ ಸೇರಲು ಸಿಮೆಂಟ್ ಕೊಳವೆಗಳನ್ನು ಅಳವಡಿಸಲಾಗಿದೆ.3.2ಕಿಮೀ ಉದ್ದದ ವಾಯುವಿಹಾರ ಪಥ ನಿರ್ಮಾಣದ ಕಾಮಗಾರಿ ಹಾಗೂ ಕೋಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮೇಯರ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.

2019-20ರಲ್ಲಿ ನವಬೆಂಗಳೂರು ಅನುದಾನದಡಿ 5 ಕೋಟಿ ಬಿಡುಗಡೆಯಾಗಿದ್ದು, ಕೆರೆ ಅಂಗಳದಲ್ಲಿ ಉದ್ಯಾನವನ, ಕಲ್ಯಾಣಿ, ಮಕ್ಕಳ ಆಟದ ಮೈದಾನ, ದೋಣಿ ವಿಹಾರ ಕೇಂದ್ರ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಸಾರಕ್ಕಿ ಕೆರೆಯನ್ನು ನಗರದ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ವರ್ಷಾಂತ್ಯದೊಳಗೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದು ಗಂಗಾಂಬಿಕೆ ಹೇಳಿದರು.

ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ