ಬೆಂಗಳೂರು, ಜು.4- ಶಾಸಕ ಆನಂದ್ಸಿಂಗ್ ಅವರ ರಾಜೀನಾಮೆ ಬಗ್ಗೆ ಇಂದು ಸ್ಪೀಕರ್ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಹೈಕಮಾಂಡ್ ಜತೆ ಚರ್ಚೆ ಮಾಡಿ ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಇಂದು ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆನಂದ್ಸಿಂಗ್ ವಿರುದ್ಧ ದೂರು ನೀಡುವುದಾಗಲಿ ಅಥವಾ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ಹೇಳುವುದಾಗಲಿ ಮಾಡಿಲ್ಲ. ಆನಂದ್ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ಕಚೇರಿಯಿಂದ ಹೊರಬಿದ್ದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದೇನೆ. ರಾಜೀನಾಮೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆನಂದ್ಸಿಂಗ್ ಅವರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿ ಫಾರಂ ನೀಡಿತ್ತು. ಜನ ಕಾಂಗ್ರೆಸ್ ಅಭ್ಯರ್ಥಿ ಎಂದು ಆಯ್ಕೆ ಮಾಡಿ ಕಳುಹಿಸಿದ್ದಾರೆ.
ರಾಜೀನಾಮೆ ನೀಡುವ ಮೊದಲು ಆನಂದ್ಸಿಂಗ್ ಮತದಾರರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಇನ್ನು ಮುಂದೆ ನಾವು ಅದನ್ನೆಲ್ಲಾ ವಿಚಾರಣೆ ಮಾಡುತ್ತೇವೆ. ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇಂದು ನಮ್ಮ ಮತ್ತು ವಿಧಾನಸಭಾಧ್ಯಕ್ಷರ ಭೇಟಿ ಸೌಜನ್ಯದ ಭೇಟಿಯಷ್ಟೇ. ಅಧಿವೇಶನಕ್ಕೆ ಸಂಬಂಧಪಟ್ಟಂತೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ.
ರಾಜೀನಾಮೆ ಪ್ರಕರಣಗಳ ಬಗ್ಗೆ ಹೆಚ್ಚು ಚರ್ಚೆ ಮಾಡಿಲ್ಲ ಎಂದರಲ್ಲದೆ, ಆನಂದ್ಸಿಂಗ್ ಮತ್ತು ರಮೇಶ್ಜಾರಕಿಹೊಳಿ ಈ ಇಬ್ಬರ ರಾಜೀನಾಮೆ ಬಗ್ಗೆ ಪಕ್ಷಕ್ಕೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.