ಬೆಂಗಳೂರು, ಜು.4-ಶಾಸಕ ಸ್ಥಾನಕ್ಕೆ ಆನಂದ್ಸಿಂಗ್ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದಂತೆ ಕಾಂಗ್ರೆಸ್ ಮನವಿ ಮಾಡಿದೆ.
ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ, ಮಾಜಿ ಶಾಸಕ ಅಶೋಕ್ಪಟ್ಟಣ್ ಅವರು ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ನಡೆಸಿದರು.
ಆನಂದ್ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಪಕ್ಷಕ್ಕೆ ಮಾಹಿತಿ ನೀಡಿಲ್ಲ. ರಾಜೀನಾಮೆಗೆ ಅವರು ಸರಿಯಾದ ಕಾರಣಗಳನ್ನೂ ಕೊಟ್ಟಿಲ್ಲ. ಅವರ ರಾಜೀನಾಮೆ ಪತ್ರ ತಾಂತ್ರಿಕವಾಗಿಯೂ ಕೂಡ ಸರಿಯಾಗಿಲ್ಲ. ಹೀಗಾಗಿ ರಾಜೀನಾಮೆ ಅಂಗೀಕರಿಸಬಾರದು ಎಂದು ಮನವಿ ಮಾಡಲಾಗಿದೆ.
ಜಿಂದಾಲ್ ಸಂಸ್ಥೆಗೆ ಭೂಮಿ ನೀಡಿದ ಕ್ರಮವನ್ನು ವಿರೋಧಿಸಿ ರಾಜೀನಾಮೆ ನೀಡಿರುವುದಾಗಿ ಆನಂದ್ಸಿಂಗ್ ಹೇಳಿಕೊಳ್ಳುತ್ತಿದ್ದಾರೆ. ಜಿಂದಾಲ್ಗೆ ಭೂಮಿ ನೀಡಿರುವ ವಿಚಾರವನ್ನು ಸರ್ಕಾರ ಪುನರ್ಪರಿಶೀಲನೆಗೆ ಒಳಪಡಿಸುತ್ತಿದೆ. ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಹಂತದಲ್ಲಿ ಇದೇ ವಿಚಾರಕ್ಕೆ ರಾಜೀನಾಮೆ ನೀಡುವುದು ಆತುರದ ನಿರ್ಧಾರವಾಗಲಿದೆ.
ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ನಮ್ಮ ಪಕ್ಷದ ಶಾಸಕರಿಗೆ ಆಮೀಷವೊಡ್ಡಿ ರಾಜೀನಾಮೆ ಕೊಡಿಸುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಆನಂದ್ಸಿಂಗ್ ಸೇರಿದಂತೆ ಯಾವುದೇ ಶಾಸಕರು ರಾಜೀನಾಮೆ ಕೊಟ್ಟರೂ ಅಂಗೀಕರಿಸಬೇಡಿ ಎಂದು ಮೌಖಿಕವಾಗಿ ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅವರ ಮನವಿಯನ್ನು ಸ್ಪೀಕರ್ ಅವರು ಸಾವಧಾನವಾಗಿ ಕೇಳಿ ಕಾನೂನು ವ್ಯಾಪ್ತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.