ಬೆಂಗಳೂರು, ಜು.4- ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಚಾಟಿ ಬೀಸುತ್ತಿರುವ ಹೈಕೋರ್ಟ್ ಇದೇ ಕಾರಣಕ್ಕಾಗಿ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸುವುದಾಗಿ ಗುಡುಗಿದೆ. ಹೈಕೋರ್ಟ್ ನ್ಯಾಯಾಲಯ ಕೆಲವು ದಿನಗಳ ಹಿಂದೆ ಬೆಂಗಳೂರು ಪೂರ್ವ ವಿಭಾಗದ ತಹಸೀಲ್ದಾರ್ ಅವರಿಗೂ ಇದೇ ರೀತಿ ಇದೇ ಪದ ಬಳಸಿ ಕಟ್ಟೆಚ್ಚರ ನೀಡಿತ್ತು.
ನಂತರ ನಡೆದ ವಿಚಾರಣೆ ವೇಳೆ ಹೈಕೋರ್ಟ್ ತಹಸೀಲ್ದಾರ್ ರಾಮಲಕ್ಷ್ಮಣ್ ಅವರನ್ನು ಸಸ್ಪೆಂಡ್ ಮಾಡುವಂತೆ ಆದೇಶ ನೀಡಿತ್ತು. ಜಿಲ್ಲಾಧಿಕಾರಿಯವರು ಈ ಆದೇಶ ಪಾಲಿಸಿ ತಹಸೀಲ್ದಾರ್ ಅವರನ್ನು ವರ್ಗಾಯಿಸಿದ್ದರು.
ಆ ಸ್ಥಾನಕ್ಕೆ ತೇಜಸ್ಕುಮಾರ್ ಅವರನ್ನು ತಹಸೀಲ್ದಾರ್ ಆಗಿ ನಿಯೋಜಿಸಲಾಗಿತ್ತು. ಈಗ ಇದೇ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ನ್ಯಾಯಾಲಯದ ಇದೇ ಪೀಠ ಜಿಲ್ಲಾಧಿಕಾರಿಯವರನ್ನು ಸಸ್ಪೆಂಡ್ ಮಾಡುವುದಾಗಿ ಗುಡುಗಿದೆ.
ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಸರ್ಕಾರದ ಸೇವಕರಂತೆ ಕಾರ್ಯನಿರ್ವಹಿಸಬೇಕು. ನಿಮ್ಮದು ಪರಿಶ್ರಮ ಮತ್ತು ಜವಾಬ್ದಾರಿಯುತ ಹುದ್ದೆ. ಸರ್ಕಾರ ನೀತಿ-ನಿಯಮಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಸಂವಿಧಾನ ರೂಪುಗೊಳಿಸಿರುವ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಜಿಲ್ಲಾಧಿಕಾರಿ ಇರಲಿ ಅಥವಾ ಯಾವುದೇ ಸರ್ಕಾರಿ ನೌಕರರಿರಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.