ಮಡಿಕೇರಿ: ಮಳೆಗಾಲ ಬಂದರೆ ಸಾಕು ಮನಸ್ಸು ಕೊಡಗಿನತ್ತ ಸೆಳೆಯುತ್ತದೆ. ಹೀಗೆ ದಕ್ಷಿಣದ ಕಾಶ್ಮೀರಕ್ಕೆ ಹೋಗ್ತಿರೋ ಪ್ರವಾಸಿಗರಿಗೆ ಜಿಲ್ಲಾಡಳಿತ ಸಿಹಿ ಸುದ್ದಿ ಕೊಟ್ಟಿದೆ.
ಕೊಡಗು ಅಂದ್ರೇನೆ ಮಂಜಿನ ನಗರಿ, ಅದರಲ್ಲೂ ಜುಲೈ, ಆಗಸ್ಟ್ ತಿಂಗಳು ಅಂದರೆ ಕೊಡಗಿನಲ್ಲಿ ಚಳಿ ಜಾಸ್ತಿ ಇರುತ್ತದೆ. ಇಂತಹ ವಾತಾವರಣದಲ್ಲಿ ಅಬ್ಬಿಫಾಲ್ಸ್, ರಾಜಾಸೀಟ್ ಎಂದು ಸುತ್ತಾಡುತ್ತಿದ್ದರೆ ಅದರ ಮಜಾನೇ ಬೇರೆ. ಹೀಗೆ ವಿವಿಧ ಪ್ರವಾಸಿ ತಾಣಗಳಲ್ಲಿ ದುಬಾರೆ ಸಾಕಾನೆ ಶಿಬಿರ ಕೂಡ ಒಂದಾಗಿದ್ದು ಈಗ ಇಲ್ಲಿ ರಾಫ್ಟಿಂಗ್ ಮಾಡಲು ಅವಕಾಶ ಸಿಕ್ಕಿದೆ.
ಇನ್ಮುಂದೆ ದುಬಾರೆಗೆ ಬರುವ ಪ್ರವಾಸಿಗರಿಗೆ ಸಂತೋಷ ನೀಡಲು ರ್ಯಾಫ್ಟಿಂಗ್ ನಡೆಸಲು ಅವಕಾಶ ಸಿಕ್ಕಿದೆ. ವಿವಿಧ ಕಾರಣಗಳಿಗೆ ಬ್ಯಾನ್ ಆಗಿದ್ದ ರಾಫ್ಟಿಂಗ್ಗೆ ಕೊಡಗು ಜಿಲ್ಲಾಡಳಿತ ಮತ್ತೆ ಅವಕಾಶ ನೀಡಿದೆ. ಹೀಗಾಗಿ ದುಬಾರೆಗೆ ಬರುವ ಪ್ರವಾಸಿಗರು ಸಾಕಾನೆ ಶಿಬಿರದ ಜೊತೆಗೆ ಬೋಟ್ ಏರಿ, ನೀರಿನ ಮೇಲೆ ತೇಲುತ್ತಾ ಮಳೆ ಹನಿಗಳಲ್ಲಿ ರಾಫ್ಟಿಂಗ್ ಮಾಡುವ ಮೂಲಕ ತಮ್ಮ ಸಂತಸದ ಕ್ಷಣಗಳನ್ನು ಇಮ್ಮಡಿಗೊಳಿಸಬಹುದು.
ರಾಫ್ಟಿಂಗ್ಗೆ ಅವಕಾಶ ನೀಡುತ್ತಿರುವ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ. ರಾಫ್ಟಿಂಗ್ ನಡೆಸುವವರು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ 7 ಕಿಲೋಮೀಟರ್ ರಾಫ್ಟಿಂಗ್ನಡೆಸಬೇಕು. ಒಂದು ತಂಡಕ್ಕೆ 600 ರೂಪಾಯಿ ಮಾತ್ರ ಶುಲ್ಕ ಪಡೆದುಕೊಳ್ಳಬೇಕು. ಎಲ್ಲೆಲ್ಲಿ ರಾಫ್ಟಿಂಗ್ ಸಾಗಲಿದೆಯೋ ಆ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲು ಇರಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ಕೂಡ ನೀಡಿದೆ. ಅಲ್ಲದೆ ರಾಫ್ಟಿಂಗ್ ನಡೆಸುವವರು ಅರಣ್ಯ ಇಲಾಖೆ, ಒಳನಾಡು ಮತ್ತು ಜಲಸಾರಿಗೆ, ಅಗ್ನಿ ಶಾಮಕ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಪಡೆದು ರ್ಯಾಫ್ಟಿಂಗ್ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ.