ನವದೆಹಲಿ,ಜು.2-ಮುಚ್ಚಲ್ಪಟ್ಟ ಐದು ರಸಗೊಬ್ಬರ ಘಟಕಗಳನ್ನು 37,971 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, ಯೂರಿಯಾ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದರು.
ಭಾರತ ಪ್ರಸ್ತುತ 241 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಯೂರಿಯಾ ಗೊಬ್ಬರವನ್ನು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ದೇಶದಲ್ಲಿ 305 ಮೆಟ್ರಿಕ್ ಟನ್ ಗೊಬ್ಬರದ ಅಗತ್ಯವಿದೆ. ಉಳಿದ ಪ್ರಮಾಣವನ್ನು ಆಮದು ಮಾಡಿಕೊಳ್ಳಬೇಕಾದ ಅಗತ್ಯವಿದ್ದು, ಈ ಕೊರತೆಯನ್ನು ನೀಗಿಸಲು ಐದು ಘಟಕಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದರು.
ಭಾರತ ರಸಗೊಬ್ಬರ ನಿಗಮ(ಎಫ್‍ಸಿಐಎಲ್) ಮತ್ತು ಹಿಂದೂಸ್ಥಾನ್ ರಸಗೊಬ್ಬರ ನಿಗಮ(ಎಚ್‍ಎಫ್‍ಸಿಎಲ್) ಈ ನಿಗಮಗಳ ವ್ಯಾಪ್ತಿಯಲ್ಲಿ ತಲ್ಚರ್(ಒಡಿಶಾ), ರಾಮಗುಂಡಂ(ಆಂಧ್ರಪ್ರದೇಶ), ಗೋರಕ್‍ಪುರ್(ಉತ್ತರಪ್ರದೇಶ), ಸಿಂದ್ರಿ( ಜಾರ್ಖಂಡ್) ಹಾಗೂ ಬರೌನಿ(ಬಿಹಾರ) ಇಲ್ಲಿನ 5 ಘಟಕಗಳನ್ನು ಹಿಂದೆ ಮುಚ್ಚಲಾಗಿತ್ತು. ಈಗ ಅವುಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.