ಮುಂಬೈ/ಮಲಾಡ್/ಪುಣೆ, ಜು.2-ಮಹಾರಾಷ್ಟ್ರದಲ್ಲಿ ವರುಣನ ಆರ್ಭಟದಿಂದ ಜಲಪ್ರಳಯ ಸೃಷ್ಟಿಯಾಗಿದ್ದು, ವಿವಿಧೆಡೆ ಭಾರೀ ಮಳೆಗೆ 36ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.
ಮುಂಬೈ, ಥಾಣೆ, ಮಲಾಡ್ ಮತ್ತು ಪುಣೆ ಸೇರಿದಂತೆ ಕೆಲವು ನಗರಗಳಲ್ಲಿ ಮಳೆಯ ಪ್ರಕೋಪಕ್ಕೆ ಸಾವು-ನೋವು ಹಾಗೂ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದ್ದು, ರಕ್ಷಣ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.
ಕೆಲವರು ನಾಪತ್ತೆಯಾಗಿರುವುದರಿಂದ ಮತ್ತು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.
ಭಾರೀ ವರ್ಷಧಾರೆಯಿಂದ ರಾಜ್ಯದ ಅನೇಕ ಸ್ಥಳಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ರೈಲ್ವೆ ಹಳಿಗಳ ಮೇಲೆ ನೀರು ನಿಂತಿರುವುದರಿಂದ ಸಂಚಾರ ವ್ಯವಸ್ಥೆ.ಸ್ಥಗಿತಗೊಂಡಿದೆ.ಜಲಪ್ರಳಯದಿಂದಾಗಿ ಶಾಲಾ-ಕಾಲೇಜುಗಳು ಸೇರಿದಂತೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಮುಂಬೈ ವರದಿ: ವಾಣಿಜ್ಯ ರಾಜಧಾನಿ ಮುಂಬೈ ಮಹಾಮಳೆಯಿಂದ ತತ್ತರಿಸಿದೆ. 10 ವರ್ಷಗಳಲ್ಲಿ ಕಂಡು ಕೇಳರಿಯದಂಥ ಧಾರಾಕಾರ ಮಳೆಯಿಂದಾಗಿ ಮುಂಬೈ ಮತ್ತು ಥಾಣೆಯಲ್ಲಿ 18 ಮಂದಿ ಮೃತಪಟ್ಟು ಅನೇಕರಿಗೆ ಗಾಯಗಳಾಗಿವೆ.
ಮುಂಬೈನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ನಿನ್ನೆ ಇಡೀ ರಾತ್ರಿ ರೌದ್ರಾವತಾರ ಮುಂದುವರಿಸಿತು. ಮುಂಬೈನ ಕುರ್ಲಾ, ಮತ್ತು ಥಾಣೆಯ ಕಲ್ಯಾಣ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ವರುಣನ ಆರ್ಭಟಕ್ಕೆ ಮಕ್ಕಳೂ ಸೇರಿದಂತೆಈವರೆಗೆ 18 ಮಂದಿ ಬಲಿಯಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.ಸಂತ್ರಸ್ತರ ರಕ್ಷಣೆಗಾಗಿ ಅಗತ್ಯವಾದ ಎಲ್ಲ ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ಧಾರೆ.
ರಸ್ತೆಗಳು ಮತ್ತು ರೈಲ್ವೆ ಹಳಿಗಳ ಮೇಲೆ ನೀರು ನಿಂತಿರುವುದರಿಂದ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ಮುಂಬೈ ನಗರದ ರಸ್ತೆಗಳ ಮೂರು ಅಡಿಗಳಷ್ಟು ನೀರು ನಿಂತಿದ್ದು, ಜನಜೀವನ ಅಯೋಮಯವಾಗಿದೆ. ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬೃಹತ್ ಮುಂಬೈ ನಗರ ಪಾಲಿಕೆ ಇಂದು ಶಾಲಾ ಕಾಲೇಜುಗಳು ಸೇರಿದಂತೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಭಾರೀ ಮಳೆ ಮುಂದುವರಿಯಲಿದ್ದು, ಸಾರ್ವಜನಿಕರು ಮನೆಯಿಂದ ಹೊರಬರದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ 10 ವರ್ಷಗಳಲ್ಲಿ ಕೇವಲ 24 ಗಂಟೆಗಳಲ್ಲಿ ಸುರಿದ ಅತ್ಯಧಿಕ ಪ್ರಮಾಣದ ದಾಖಲೆ ಮಳೆ ಇದಾಗಿದೆ.
ಭಾರೀ ಮಳೆಯಿಂದ ಕೆಲವಡೆ ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿ ಬಿದ್ದಿವೆ. ಹಳೆ ಮನೆಗಳು ಕುಸಿದಿವೆ.
ರಕ್ಷಣಾ ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ಧಾರೆ.
54 ವಿಮಾನಗಳ ಹಾರಾಟ ರದ್ದು: ಭಾರೀ ಮಳೆಯಿಂದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ಸ್ಪೈಸ್ ಜೆಟ್ ವಿಮಾನ ಅಡ್ಡಾದಿಡ್ಡಿಯಾಗಿ ಚಲಿಸಿ ಮಧ್ಯದಲ್ಲೇ ಕೆಟ್ಟು ನಿಂತಿದ್ದರಿಂದ 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಗೋಡೆ ಕುಸಿದು 14 ಸಾವು: ಧಾರಾಕಾರ ಮಳೆಯಿಂದಾಗಿ ಮಲಾಡ್ ಪೂರ್ವ ಪ್ರದೇಶದ ಕುರಾರ್ ಎಂಬಲ್ಲಿ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾದ ಗುಡಿಸಲುಗಳ ಮೇಲೆ ಗೋಡೆ ಕುಸಿದು 14 ಮಂದಿ ಸಾವಿಗೀಡಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ರಕ್ಷಣಾ ದಳ-ಎನ್ಡಿಆರ್ಎಫ್ ಆಗಮಿಸಿದ್ದು, ಪರಿಹಾರ ಕಾರ್ಯ ಮುಂದುವರಿಸಿದ್ದಾರೆ. ಈವರೆಗೆ ನಾಲ್ವರನ್ನು ರಕ್ಷಿಸಿ ಶತಾಬ್ಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರೀ ಮಳೆಯಿಂದಾಗಿ ಗುಡಿಸಲುಗಳ ಮೇಲೆ ಕಾಂಪೌಂಡ್ ಗೋಡೆ ಕುಸಿದು 13 ಮಂದಿ ಮೃತಪಟ್ಟಿದ್ದಾರೆ. ಭಗ್ನಾವಶೇಷಗಳ ಅಡಿ ಇನ್ನೂ ಕೆಲವರು ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಪುಣೆಯಲ್ಲಿ 8 ಬಲಿ: ಪುಣೆಯ ಕೊಂಡ್ವಾದಲ್ಲಿ ಅಪಾರ್ಟ್ಮೆಂಟ್ ಗೋಡೆ ಕುಸಿದು 19 ಮಂದಿ ಬಲಿಯಾದ ಘೋರ ದುರಂತ ಹಚ್ಚ ಹಸಿರಾಗಿರುವಾಗಲೇ ಮತ್ತೊಂದು ದುರ್ಘಟನೆ ಮರುಕಳಿಸಿದೆ.
ಪುಣೆಯ ಅಂಬೆಗಾಂವ್ನ ಸಿಂಗದ್ ಕಾಲೇಜಿನ ಗೋಡೆ ಕುಸಿದು ಕನಿಷ್ಠ ಆರು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಇಂದು ನಸುಕಿನಲ್ಲಿ ಸಂಭವಿಸಿದೆ.
ಸುಮಾರು 1.15ರ ನಸುಕಿನಲ್ಲಿ ಕಾಲೇಜಿನ ಕಾಂಪೌಂಡ್ ಗೋಡೆ ಕುಸಿದು ಎಂಟು ಮಂದಿ ಮಣ್ಣಿನ ಅವಶೇಷಗಡಿ ಸಿಲುಕಿದರು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದರಾದರೂ ಆರು ಮಂದಿ ಮೃತಪಟ್ಟರು.
ಪುಣೆ ನಗರದಲ್ಲಿ ಕೇವಲ ಮೂರು ದಿನಗಳಲ್ಲಿ ಸಂಭವಿಸಿದ ಇಂಥ ಎರಡನೇ ದುರಂತ ಇದಾಗಿದೆ. ಭಾರತುವಾ ಕೊಂಡ್ವಾದಲ್ಲಿ ಬಹು ಅಂತಸ್ತುಗಳ ವಸತಿ ಕಟ್ಟಡದ ಕಾಂಪೌಂಡ್ ಗೋಡೆ ಕುಸಿದು ಕೆಳ ಪ್ರದೇಶದ ತಾತ್ಕಾಲಿಕ ಗುಡಿಸಲುಗಳ ಮೇಲೆ ಬಿದ್ದು, 17 ಕೂಲಿ ಕಾರ್ಮಿಕರು ಮೃತಪಟ್ಟು ಇತರ ಐವರು ತೀವ್ರ ಗಾಯಗೊಂಡಿದ್ದಾರೆ.
ಸರ್ಕಾರಕ್ಕೆ ಪ್ರತಿಪಕ್ಷಗಳ ತರಾಟೆ: ಭಾರೀ ಮಳೆಯ ಮುನ್ಸೂಚನೆ ಇದ್ದರೂ ಅಗತ್ಯ ರಕ್ಷಣಾ ಮತ್ತು ಪರಿಹಾರ ಕ್ರಮ ಕೈಗೊಳ್ಳುವಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡವು.
ಈ ಸಂದರ್ಭದಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ವಾದ-ವಾಗ್ವಾದಕ್ಕೆ ಕಾರಣವಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.