ಬೆಂಗಳೂರು, ಜು.2- ನಮ್ಮ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುವುದಾದರೆ ಸೆಳೆದುಕೊಳ್ಳಲಿ. ನಾವಂತೂ ಬೇರೆ ಪಕ್ಷದ ಯಾರೊಬ್ಬರನ್ನೂ ಸಂಪರ್ಕ ಮಾಡಿಲ್ಲ. ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದರೆ ಮಾಡಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ.
ಬಿಜೆಪಿಯವರು ನಮ್ಮ ಶಾಸಕರಿಗೆ ಆಪರೇಷನ್ ಕಮಲ ಮಾಡಿದರೆ, ನಮಗೂ ಕೂಡ ರಿವರ್ಸ್ ಆಪರೇಷನ್ ಮಾಡಲು ಬರುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಯಡಿಯೂರಪ್ಪ, ರಿವರ್ಸ್ ಆಪರೇಷನ್ ಮಾಡುವುದಾದರೆ ಮಾಡಲಿ. ನಾವೇನು ಅವರನ್ನು ತಡೆದಿದ್ದೇವೆಯೇ ಎಂದು ಪ್ರಶ್ನಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಬಿಜೆಪಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದುವರೆಗೂ ಎಷ್ಟು ಮಂದಿ ಬಿಜೆಪಿ ಶಾಸಕರು ಹೊರ ಹೋಗಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಯಾರಾದರು ಇರಳು ಕಂಡ ಬಾವಿಗೆ ಹಗಲಿನಲ್ಲಿ ಬೀಳುತ್ತಾರೆಯೇ ಎಂದು ವ್ಯಂಗ್ಯವಾಡಿದರು.
ನಾವು ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದಿಲ್ಲ. ಎಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರತಿ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಶಾಸಕರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು. ಕುಮಾರಸ್ವಾಮಿ ಮೊದಲು ಅಮೆರಿಕದಿಂದ ಬರಲಿ. ಅದೇನು ಅಷ್ಟು ದೂರವಿದೆಯೇ. ಅವರು ಬಂದ ನಂತರ ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡೋಣ ಎಂದು ಮಾರ್ಮಿಕವಾಗಿ ಬಿ.ಎಸ್.ಯಡಿಯೂರಪ್ಪ ಹೇಳಿದರು.