ಬೆಂಗಳೂರು, ಜು.2- ಕೆರೆ ಕುಂಟೆ, ಗುಡಿಗೋಪುರ, ಪೇಟೆಗಳನ್ನು ನಿರ್ಮಿಸಿ ಬೆಂಗಳೂರು ನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಜಾತ್ಯತೀತವಾಗಿ ಸ್ಮರಿಸಬೇಕೆಂದು ಬೆಂಗಳೂರು ದಕ್ಷಿಣ ತಾಲ್ಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಪುಟ್ಟೇಗೌಡ ಹೇಳಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ದೊಡ್ಡಕಲ್ಲಸಂದ್ರ ಬಳಿಯ ನಾರಾಯಣನಗರದಲ್ಲಿ ಹಮ್ಮಿಕೊಂಡಿದ್ದ 509ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ದೂರದೃಷ್ಟಿಯಿಂದ ಎಲ್ಲ ಜನಾಂಗದವರು ಒಗ್ಗಟ್ಟಾಗಿ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಜೀವನ ಸಾಗಿಸಲಿ ಎಂದು ನಾಲ್ಕು ಗೋಪುರ ನಿರ್ಮಿಸಿ ಹಲವಾರು ಪೇಟೆ, ಕೆರೆ, ಕುಂಟೆ, ಕಟ್ಟುವ ಮೂಲಕ ಬೆಂಗಳೂರನ್ನು ನಿರ್ಮಿಸಿ ಎಲ್ಲಾ ಜನಾಂಗದವರಿಗೆ ಅಂದುಇಂದು ಬದುಕನ್ನು ನೀಡಿದ ಮಹಾನ್ ಆ ಅವತಾರ ಪುರುಷ ಎಂದು ಬಣ್ಣಿಸಿದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಡಿ.ಹನುಮಂತಯ್ಯ ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಕಲೆಗಳ ಬೆಳೆವಣಿಗೆ ಜೊತೆಗೆ ಎಲ್ಲ ಜನಾಂಗದವರಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಧಿಕಾರ, ಶಿಕ್ಷಣ, ಸವಲತ್ತು ನೀಡುವ ಮೂಲಕ ರಾಜ್ಯದ ವಿವಿಧೆಡೆ ನೂರಾರು ಕೆರೆಗಳ ನಿರ್ಮಾಣ ಮಾಡುವ ನೀರಿನ ಮಹತ್ವ, ಬೇಸಾಯಕ್ಕೆ ಆದ್ಯತೆ ನೀಡಿದ ಅವತಾರ ಪುರುಷ ಕೆಂಪೇಗೌಡರ ಜಯಂತಿಯನ್ನು ನಿತ್ಯ ನಿರಂತರವಾಗಿ ಎಲ್ಲಾ ಜನರು ಆಚರಿಸಬೇಕೆಂದು ಕರೆ ನೀಡಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ದೇವರಾಜು , ಪಾಲಿಕೆ ಮಾಜಿ ಸದಸ್ಯ ಡಿ.ಮುನಿರಾಜು, ಸಂಘದ ಅಧ್ಯಕ್ಷ ಎಚ್.ಎನ್. ಮುನಿಭೆರಪ್ಪ, ಬಸವರಾಜು, ಗಿರಿಧರ್, ಹೇಮ, ಶಿವಕುಮಾರ್, ಜಯರಾಮು, ಆನಂದ್, ರಂಜಿತ್, ವೆಂಕಟೇಶ್ ಮೂರ್ತಿ, ಶ್ರೀನಾಥ್, ಜಗದೀಶ್ ಮತ್ತಿತರರ್ದಿರು.