ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತದೆ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ಜೂ.28-ಜನರು ಯಾವುದೇ ಪಕ್ಷಕ್ಕೆ ಮತ ಹಾಕಿದ್ದರೂ ತೊಂದರೆ ಇಲ್ಲ.ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೇ ಹೆಚ್ಚು ಜನ ಮತ ಹಾಕಿದ್ದಾರೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ದಿಣ್ಣೂರು ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಮತ ಹಾಕಿದ್ದು, ಕಾಂಗ್ರೆಸ್‍ಗೇ ಹೆಚ್ಚು ಜನ ಮತ ಹಾಕಿದ್ದಾರೆ ಎಂದರು.

ಜನರು ಮತ ಹಾಕಿರುವುದಕ್ಕೂ ಅಭಿವೃದ್ಧಿ ವಿಚಾರಕ್ಕೂ ಸಂಬಂಧ ಕಲ್ಪಿಸುವುದು ಬೇಡ. ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತದೆ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬುದಷ್ಟೇ ಸರ್ಕಾರದ ಉದ್ದೇಶ ಎಂದು ಹೇಳಿದರು.

ರಸ್ತೆ ಅಗಲೀಕರಣ:
ಆರ್.ಟಿ.ನಗರದ ದಿಣ್ಣೂರು ಮುಖ್ಯರಸ್ತೆಯನ್ನು 80 ಅಡಿ ಅಗಲೀಕರಣ ಮಾಡಲು ಅಂದಾಜು ಮಾಡಲಾಗಿದ್ದು, ಇದಕ್ಕಾಗಿ ಅಂಗಡಿ ಮನೆಗಳನ್ನು ಕಳೆದುಕೊಳ್ಳುವ ಸ್ಥಳೀಯರಿಗೆ ನಷ್ಟ ಭರಿಸಲಾಗುವುದು ಎಂದು ತಿಳಿಸಿದರು.

ಸುಲ್ತಾನ್‍ಪಾಳ್ಯ, ಕಾವಲ್‍ಭೆರಸಂದ್ರ ಸೇರಿದಂತೆ ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ದಿಣ್ಣೂರು ಮುಖ್ಯರಸ್ತೆ ಕಿರಿದಾಗಿದ್ದು, ವಾಹನಗಳ ಸಂಚಾರ ಹೆಚ್ಚಾಗಿದೆ. ರಸ್ತೆ ಅಗಲೀಕರಣ ಮಾಡಬೇಕೆಂದು ಹಲವು ದಿನಗಳಿಂದ ಬೇಡಿಕೆ ಇದೆ. ಇದಕ್ಕಾಗಿ ಬಿಬಿಎಂಪಿ ನೀಲನಕ್ಷೆ ಸಿದ್ಧಪಡಿಸಿ ಹಣವನ್ನೂ ಒದಗಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ 10 ಅಡಿ ಅಗಲೀಕರಣ ಮಾಡಬೇಕೆಂಬ ಬೇಡಿಕೆ ಇದ್ದು, ಇದಕ್ಕಾಗಿ ರಸ್ತೆ ಬದಿಯ ಎರಡೂ ಬದಿಯ ಮನೆ, ಅಂಗಡಿಗಳನ್ನು ಒಡೆಯಬೇಕಿದೆ. ಇದರಿಂದಾಗುವ ನಷ್ಟದ ಕುರಿತು ಈಗಾಗಲೇ ಅಂದಾಜು ಮಾಡಲಾಗಿದೆ. ಅದನ್ನು ಯಾವ ರೀತಿ ಭರಿಸಬೇಕು ಎಂಬುದನ್ನು ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಸ್ಥಳೀಯರು ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅಪಾರ್ಟ್‍ಮೆಂಟ್ ನಿರ್ಮಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದನ್ನು ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.

ಆರ್.ಟಿ.ನಗರ ಮತ್ತು ಈ ಭಾಗದ ಸುತ್ತಮುತ್ತ ನನಗೆ ಚಿಕ್ಕಂದಿನಿಂದಲೂ ಚಿರಪರಿಚಿತ. ಇಲ್ಲೆಲ್ಲ ರಾಗಿ ಬೆಳೆಯಲಾಗುತ್ತಿತ್ತು. ಆಗಿನಿಂದಲೂ ಈ ಜಾಗವನ್ನು ನಾನು ನೋಡಿದ್ದೇನೆ. ಮೋಟಾರ್‍ಬೈಕ್‍ನಲ್ಲಿ ಓಡಾಡುತ್ತಿದ್ದೆ. ಈ ಭಾಗದ ಪ್ರತಿ ಸಣ್ಣ ಸಣ್ಣ ಪ್ರದೇಶಗಳ ಪರಿಚಯವೂ ನನಗಿದೆ ಎಂದು ಹೇಳಿದರು.

ಬೆಂಗಳೂರು ಇಂದು ನಿರೀಕ್ಷೆಗೂ ಮೀರಿ ಬೆಳೆದಿದೆ. ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳನ್ನು ಇನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.

ಜೀರೋ ಟ್ರಾಫಿಕ್‍ನಿಂದಾಗಿ ಶಾಲಾ ಬಸ್‍ಗಳು ಸಂಚರಿಸದೆ ವಿಳಂಬವಾದ ಬಗ್ಗೆ ಸಾರ್ವಜನಿಕರಿಂದ ಕೇಳಿ ಬಂದ ಆಕ್ಷೇಪಗಳಿಗೆ ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.

ಆ್ಯಂಬುಲೆನ್ಸ್ ಮತ್ತು ಶಾಲಾ ವಾಹನಗಳಿಗೆ ಅಡ್ಡಿ ಪಡಿಸದಂತೆ ನಾನು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಆದರೂ ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತವೆ. ನಾನು ಶಾಲಾ ಮಕ್ಕಳ ಕ್ಷಮೆ ಕೇಳುತ್ತೇನೆ. ಜೀರೋ ಟ್ರಾಫಿಕ್‍ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆಯೂ ಕ್ಷಮೆ ಕೋರಿದಲ್ಲದೆ, ಮತ್ತೊಮ್ಮೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿದರು.

ದೂರುಗಳ ಸುರಿಮಳೆ:
ಉಪಮುಖ್ಯಮಂತ್ರಿಗಳ ರೌಂಡ್ಸ್ ವೇಳೆ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.

ಮೊದಲು ಸುಸಜ್ಜಿತ ರಸ್ತೆ ಮಾಡಿಕೊಟ್ಟರೆ ರಸ್ತೆ ಅಗಲೀಕರಣದ ಅವಶ್ಯಕತೆಯೇ ಬರುವುದಿಲ್ಲ. ಬಹಳಷ್ಟು ರಸ್ತೆಗಳಲ್ಲಿ ಟ್ರಾನ್ಸ್‍ಫಾರ್ಮರ್‍ಗಳು ತುಂಬಿವೆ.

ರಸ್ತೆಗಳೆಲ್ಲಾ ಕಸದ ತೊಟ್ಟಿಯಾಗಿವೆ. ಯಾವ ರಸ್ತೆ ನೋಡಿದರೂ ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳಿವೆ. ಮೊದಲು ಈ ಸಮಸ್ಯೆಗಳನ್ನು ಪರಿಹರಿಸಿ ಎಂದು ಜನರು ಒತ್ತಾಯಿಸಿದರು.

ಸಚಿವರಾದ ಜಮೀರ್ ಅಹಮ್ಮದ್ ಖಾನ್, ಶಾಸಕರಾದ ಭೆರತಿ ಸುರೇಶ್, ಅಖಂಡ ಶ್ರೀನಿವಾಸಮೂರ್ತಿ, ಮೇಯರ್ ಗಂಗಾಂಬಿಕೆ, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ