ಪೊಲೀಸ್ ಎನ್‍ಕೌಂಟರ್‍ನಲ್ಲಿ ಗಾಯಗೊಂಡ ಇಬ್ಬರು ರೌಡಿಗಳು

ಬೆಂಗಳೂರು,ಜೂ.28- ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ರೌಡಿಗಳಿಗೆ ಚುರುಕು ಮುಟ್ಟಿಸುತ್ತಿದ್ದು, ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಪೆÇಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಇಬ್ಬರು ರೌಡಿಗಳು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ವಾಸೀಂ ಆರ್‍ಟಿನಗರ ಮತ್ತು ಜೆಸಿನಗರ ಪೊಲೀಸ್ ಠಾಣೆಯ ರೌಡಿಶೀಟರ್.ಈತನ ವಿರುದ್ದ ಎರಡು ಕೊಲೆ, ಎರಡು ಕೊಲೆ ಯತ್ನ, ದರೋಡೆ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿವೆ.

ಹೆಣ್ಣೂರು ಠಾಣೆ ಇನ್‍ಸ್ಪೆಕ್ಟರ್ ಕುಲಕರ್ಣಿ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ವಾಸೀಂ ಬಲಗಾಲಿಗೆ ತಗುಲಿ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತೊಬ್ಬ ಆರೋಪಿ ಫಯಾಜ್‍ನ ಹೆಸರು ಬನಶಂಕರಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದೆ. ಈತನ ವಿರುದ್ದ ಕೇರಳ, ಬನಶಂಕರಿ, ಕೆ.ಎಸ್.ಲೇಔಟ್, ಆರ್.ಟಿ.ನಗರ, ತುಮಕೂರು ಪೊಲೀಸ್ ಠಾಣೆಗಳಲ್ಲಿ ಎರಡು ಕೊಲೆ, ಆರು ಕೊಲೆಯತ್ನ, ಮೂರು ದರೋಡೆ ಸೇರಿ ಒಟ್ಟು 11 ಪ್ರಕರಣಗಳಿವೆ.

ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಕೆ.ಜಿ.ಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಎಡ್ವಿನ್ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಈತನ ಕಾಲಿಗೆ ತಗುಲಿ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಈ ಇಬ್ಬರು ಆರೋಪಿಗಳು ಇತರೆ ಮೂವರು ಸಹಚರರೊಂದಿಗೆ ಸೇರಿ ಸಲೀಂ ಎಂಬಾತನ ಜೊತೆ ಜಗಳವಾಡಿ ಕೊಲೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳು ಅರ್ಕಾವತಿ ಲೇಔಟ್‍ನಲ್ಲಿರುವ ಬಗ್ಗೆ ಮಾಹಿತಿ ಪಡೆದ ಹೆಣ್ಣೂರು ಠಾಣೆ ಹಾಗೂ ಕೆಜಿಹಳ್ಳಿ ಠಾಣೆ ಇನ್‍ಸ್ಪೆಕ್ಟರ್‍ಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಹೆಡ್‍ಕಾನ್‍ಸ್ಟೆಬಲ್ ಸಿದ್ದಲಿಂಗಸ್ವಾಮಿ ಅವರ ಮೇಲೆ ಡ್ರಾಗರ್‍ನಿಂದ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್‍ಗಳು ಹಾರಿಸಿದ ಗುಂಡು ಆರೋಪಿಗಳಿಬ್ಬರ ಕಾಲಿಗೆ ತಗುಲಿ ಗಾಯಗೊಂಡಿದ್ದು, ಇವರಿಬ್ಬರನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ