ಬೆಂಗಳೂರು, ಜೂ.27-ಇನ್ನುಮುಂದೆ ಎಲ್ಲಾ ಬಗೆಯ ತುರ್ತು ಸೇವೆಗಳಿಗೆ ಒಂದೇ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೀಗೊಂದು ಸಹಾಯವಾಣಿ ಜಾರಿಗೆ ತಂದಿದೆ.
ಮೊದಲೆಲ್ಲ ಪೊಲೀಸ್ ನೆರವು ಬೇಕಾದಲ್ಲಿ 100ಕ್ಕೆ, ಅಗ್ನಿಶಾಮಕ ನೆರವು ಬೇಕಾದಲ್ಲಿ 101ಕ್ಕೆ, ಆರೋಗ್ಯಕ್ಕೆ 108ಗೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು.
ಆದರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ವಿನೂತನ ತುರ್ತು ಸಹಾಯವಾಣಿ ಸಂಖ್ಯೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಸಹ ಡಯಲ್ ಮಾಡಿ ನೆರವು ಪಡೆಯಬಹುದಾಗಿದ್ದು, ಶೀಘ್ರ ಕರ್ನಾಟಕದಲ್ಲಿ ಇದು ಜಾರಿಗೆ ಬರಲಿದೆ.
ಸದ್ಯ ಒಟ್ಟು ದೇಶದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ಲಕ್ಷದೀಪ, ಅಂಡಮಾನ್, ದಾದರ್ ನಗರ್ ಹವೇಲಿ, ದಿಯು ಮತ್ತು ದಮನ್ನಲ್ಲಿ ಸೇವೆ ಕಾರ್ಯರೂಪಕ್ಕೆ ಬರಲಿದೆ.
112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಹೀಗೆ ಸಂತ್ರಸ್ತರಿಗೆ ಸಂಬಂಧ ಪಟ್ಟ ಪ್ರದೇಶಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ.
ಸ್ಮಾರ್ಟ್ ಪೋನ್ ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಫೀಚರ್ ಪೋನ್ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಸಂಬಂಧ ಪಟ್ಟ ರಾಜ್ಯಗಳ ಇಆರ್ ಎಸ್ಎಸ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಇ-ಮೇಲ್ ಹಾಗೂ ಎಸ್ಓಎಸ್ ಸಂದೇಶದ ಮೂಲಕ ರಾಜ್ಯ ಎ.ಆರ್ಸಿಗೆ ಕಳುಹಿಸಬಹುದು.
112 ಇಂಡಿಯಾ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಯಪಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.ಈ ತುರ್ತುಸೇವೆಗಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ವಾಯ್ಸ್ ಕಾಲ್, ಮೆಸೇಜ್, ಇ ಮೇಲ್ ಕೂಡ ಮಾಡಬಹುದು.