ಯಶವಂತಪುರ, ಜೂ.27- ಗ್ರಾಮ ಸಭೆ ಸರ್ಕಾರಿ ಅಧಿಕಾರಿಗಳಿಗೆ ಕಾಟಾಚಾರದ ಸಭೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಸಂದ್ರ ಗ್ರಾಮದ ಕನ್ನಿಕಾ ಬಡಾವಣೆಯಲ್ಲಿ ಸೂಲಿಕೆರೆ ಗ್ರಾಮ ಪಂಚಾಯತಿಯ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನ ಸಾಮಾನ್ಯರು ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸ್ಥಳದಲ್ಲೆ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದ್ದ ಗ್ರಾಮ ಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಫಲವಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 29 ಇಲಾಖೆಗಳ ಪೈಕಿ ಕೇವಲ ಹನ್ನೊಂದು ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರು ಸಹ ಕಿರಿಯ ಅಧಿಕಾರಿಗಳು, ಅವರಿಂದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಬಡವರ ಕಲ್ಯಾಣಕ್ಕೆ ಹಾಗೂ ಜೀವನಮಟ್ಟ ಸುಧಾರಣೆಗೆ ಸರ್ಕಾರ ಪೂರಕ ಯೋಜನೆಗಳು, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾವಿರಾರು ಕೋಟಿ ಅನುದಾನ ನೀಡಿದರು ಅಧಿಕಾರಿಗಳ ಅದಕ್ಷತೆಯಿಂದ ಜನರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಂದಾಯ ಹಾಗೂ ಆಹಾರ ಇಲಾಖೆಗಳ ವಿರುದ್ಧ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಪಹಣಿ ತಿದ್ದುಪಡಿ, ಫವತಿ ಖಾತೆ, ವರ್ಗಾವಣೆಗೆ ರೈತರು ತಾಲ್ಲೂಕು ಕಚೇರಿಗೆ ವರ್ಷಾನುಗಟ್ಟಲೆ ಅಲೆಯಬೇಕಾದ ದುಸ್ಥಿತಿ ಇದೆ. ಪಡಿತರ ಚೀಟಿ ಸಂಬಂಧ ಆಹಾರ ಇಲಾಖೆಯ ಅಧಿಕಾರಿಗಳು ಬಡವರಿಗೆ ಕಿರುಕುಳ ಕೊಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯವರು ನಿಗದಿತ ದಿನಗಳಲ್ಲಿ ಮಾತ್ರ ಪಡಿತರ ವಿತರಿಸುತ್ತಾರೆ ಪ್ರಶ್ನಿಸಿದರೆ ದೌರ್ಜನ್ಯ ಎಸಗುತ್ತಾರೆ ಎಂಬ ದೂರುಗಳಿದ್ದರೂ ಅವರ ಮೇಲೆ ಕ್ರಮ ಸಾಧ್ಯವಾಗುತ್ತಿಲ್ಲ ಎಂದರು.
ಸಾರ್ವಜನಿಕರು ಸಭೆಯಲ್ಲಿ ದೂರುಗಳ ಸುರಿಮಳೆಗೈದರು. ಕೊಮ್ಮಘಟ್ಟ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಕಂದಾಯ ಅಧಿಕಾರಿಗಳಿಗೆ 175 ಮಂದಿಯ ದಾಖಲೆಗಳನ್ನು ಸಲ್ಲಿಸಿದರೆ ಕೇವಲ 25 ಗುರುತಿನ ಚೀಟಿ ಮಾತ್ರ ಬಂದಿವೆ. 172 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದು ಗ್ರಾಮಸ್ಥರಿಂದ ಬೈಗುಳ ಕೇಳುವಂತಾಗಿದೆ ಎಂದು ಆರೋಪಿಸಿದರು.
ಜಿಪಂ ಸದಸ್ಯೆ ಲತಾ ಹನುಮಂತೇಗೌಡ, ತಾಪಂ ಸದಸ್ಯೆ ಶೋಭಾ ತಿಮ್ಮೇಗೌಡ, ಪಂಚಾಯಿತಿ ಅಧ್ಯಕ್ಷ ಆಂಜಿನಪ್ಪ, ಉಪಾಧ್ಯಕ್ಷೆ ಅನುಸೂಯಾ, ಪಿಡಿಒ ನಾಗರಾಜು, ಮುಖಂಡ ಮುರುಳಿಧರ್, ಎಇಇ ಕುಂಬಾರ್, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.