ಮಳೆ ಪ್ರಮಾಣದಲ್ಲಿ ಇಳಿಕೆ ಹಿನ್ನಲೆ-ಗಗನಕ್ಕೇರಿದ ತರಕಾರಿ ಬೆಲೆಗಳು

ಬೆಂಗಳೂರು, ಜೂ.27- ಒಂದೆಡೆ ಸಕಾಲಕ್ಕೆ ಸರಿಯಾಗಿ ಮಳೆಯಾಗದೆ ನಾಡಿನ ಅನ್ನದಾನ ಜೀವನವೇ ಮೂರಾಬಟ್ಟೆಯಾಗಿದ್ದರೆ, ಇನ್ನೊಂದೆಡೆ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕೊಳ್ಳಬೇಕೇ ಬೇಡವೇ ಎಂಬ ಮೀನಾಮೇಷ ಎಣಿಸುತ್ತಿದ್ದಾರೆ.

ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಪ್ರಾರಂಭವಾಗಿ ತರಕಾರಿಗಳ ಬೆಲೆ ಇಳಿಮುಖವಾಗುತ್ತಿತ್ತು. ಆದರೆ ಈ ಬಾರಿ ಮಳೆ ಪ್ರಮಾಣ ಇಳಿಕೆಯಾಗಿರುವುದು, ಹವಾಮಾನ ವೈಪ್ಯರೀತ್ಯ ಸೇರಿದಂತೆ ನಾನಾ ಕಾರಣಗಳಿಂದಾಗಿ ಮಳೆ ಈಗಲೂ ಏರುಪೇರಾಗುತ್ತಿದೆ.

ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ. ಮಧ್ಯಕರ್ನಾಟಕ, ರಾಜಧಾನಿ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಈಗಲೂ ಮಳೆಯಾಗದ ಕಾರಣ ರೈತರು ತಲೆ ಮೇಲೆ ಕೈಹೊತ್ತು ಕುಳಿತು ಆಗಸದತ್ತ ಮುಖ ಮಾಡಿದ್ದಾರೆ.

ತರಕಾರಿಯನ್ನು ಅತಿ ಹೆಚ್ಚು ಬೆಳೆಯುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿವಮೊಗ್ಗ, ದಾಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಹೀಗಾಗಿ ಟೊಮ್ಯಾಟೊ, ಈರಳ್ಳಿ, ಬೀನ್ಸ್, ಕ್ಯಾರೆಟ್, ಹಸಿಬಠಾಣಿ, ಡಬ್ಬಲ್ ಬೀನ್ಸ್, ನುಗ್ಗೆಕಾಯಿ, ಬೇಬಿಕಾರ್ನ್, ಅವರೇಕಾಯಿ, ಬದನೆಕಾಯಿ, ಬೆಳ್ಳುಳ್ಳಿ, ಸೊಪ್ಪು ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಗಗನಮುಖಿಯಾಗಿದೆ.

ಕಳೆದ ವಾರ ಒಂದು ಕೆಜಿಗೆ 120ರೂ. ಇದ್ದ ಬೀನ್ಸ್ ಇದೇ ಮೊದಲ ಬಾರಿಗೆ 200ರೂ. ಗಡಿ ದಾಟಿದೆ. ಇದೇ ರೀತಿ ಕ್ಯಾರೆಟ್ ಕೂಡ 120ರೂ.ಗೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಕುಸಿದು ಬಿದ್ದಿದ್ದ ಟೊಮ್ಯಾಟೋ ಬೆಲಯೂ ಕೂಡ ಹೆಚ್ಚಳವಾಗಿದೆ. ಪರಿಣಾಮ ಗ್ರಾಹರಕ ಜೇಬಿಗೆ ಕತ್ತರಿ ಬಿದ್ದಿದ್ದು, ತರಕಾರಿ ಕೊಳ್ಳುವುದೇ ಬಹುತೇಕ ದುಸ್ತರವಾಗಿದೆ. ಅದರಲ್ಲೂ ಮಧ್ಯಮವರ್ಗದವರಂತೂ ತರಕಾರಿ ಕೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ.

ಬೇಸಿಗೆಯಿಂದಾಗಿ ಮಳೆಯ ಪ್ರಮಾಣ ಕಡಿಮೆ, ಬೋರ್‍ವೇಲ್‍ಗಳು ಬತ್ತಿದ ಪರಿಣಾಮ ಸೇರಿದಂತೆ, ತರಕಾರಿಯ ಕೃಷಿ ಕುಂಟಿತಗೊಂಡಿದೆ. ಹೀಗಾಗಿ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ತರಕಾರಿಯ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ನಗರದ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಈ ಹಿಂದೆ ರೂ.20 ಇದ್ದದ್ದೂ, ಇಂದು ರೂ.43 ರೂಪಾಯಿಗೆ ಏರಿಕೆ ಕಂಡಿದೆ. ಬೀನ್ಸ್ ರೂ.90 ಇದ್ದದ್ದೂ, ರೂ.122ಕ್ಕೆ ಏರಿಕೆಯಾಗಿದೆ. ಇನ್ನೂ ಕ್ಯಾರೇಟ್ ರೂ.56ನಿಂದ ರೂ.76ಕ್ಕೆ ದರ ಜಿಗಿತ ಕಂಡಿದೆ.

ಹೀರೇಕಾಯಿ ರೂ.25ಕ್ಕೆ ಸಿಗ್ತಾ ಇದ್ದದ್ದೂ ರೂ.66ಕ್ಕೆ ಏರಿಕೆ ಕಂಡು ಕೊಂಡುಕೊಳ್ಳೋಕೆ ಕಷ್ಟವಾಗಿ ಪರಿಣಮಿಸಿದೆ.

ಇನ್ನೂ ಬೇಸಿಗೆಯ ತಾಪಮಾನಕ್ಕೆ ನೀರಿಲ್ಲದೇ ತರಕಾರಿ ಕೃಷಿಗಾರಿಕೆ ಕುಂಠಿತದಿಂದಾಗಿ ಬೆಲೆ ಏರಿಕೆಯ ಬಿಸಿ ಕಂಡಿದ್ದರೇ, ಮತ್ತೊಂದೆಡೆ ರಾಜಧಾನಿಯಲ್ಲಿ ಸುರಿದ ಮಳೆಯಿಂದಾಗಿ ತರಕಾರಿ ಸಾಗಾಟದಲ್ಲಿ ವ್ಯತ್ಯಾಸ ಉಂಟಾಗಿ ಪ್ರಮಾಣಕ್ಕೆ ತಕ್ಕಂತೆ ತರಕಾರಿ ಸರಬರಾಜು ಆಗದೇ ಏರಿಕೆಯನ್ನು ಏರು ಗತಿಯಲ್ಲೇ ಮುಟ್ಟುತ್ತಿದೆ.

ತರಕಾರಿ ಬೆಲೆ ಗಗನಕ್ಕೇರಿದ್ದರಿಂದ ನಗರದ ಮಧ್ಯಮ ವರ್ಗ, ಬಡ ವರ್ಗದ ಜನರು ಕೊಂಡುಕೊಳ್ಳಲು ಕಷ್ಟವಾಗಿದ್ದು, ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಈ ಮೂಲಕ ಹೋಟೆಲ್ ಉದ್ಯಮದ ಮೇಲೂ ತರಕಾರಿ ಏರಿಕೆಯ ಬಿಸಿ ತಟ್ಟಿದೆ.

ಬಿಸಿಲಿನ ಝಳಕ್ಕೆ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ತೋಟಗಳಲ್ಲಿ ತರಕಾರಿ ಬೆಳೆ ಸರಿಯಾಗಿ ಬಾರದ ಕಾರಣ ತರಕಾರಿ ಮತ್ತು ಸೊಪ್ಪುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುವಂತಾಗಿದೆ.

ದಿನೇ ದಿನೆ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ತಾಜಾ ತರಕಾರಿಗಳು ಬರುತ್ತಿಲ್ಲ. ಬೆಲೆ ಏರುತ್ತಿರುವುದರಿಂದ ಗ್ರಾಹಕರಲ್ಲಿ ಖರೀದಿ ಆತಂಕ ಉಂಟಾಗಿದೆ. ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು ಕೆ.ಜಿ.ಗಟ್ಟಲೇ ಖರೀದಿಸುವ ಬದಲಿಗೆ ಅರ್ಧ, ಕಾಲು ಕೆ.ಜಿ.ಗೆ ಇಳಿದಿದ್ದಾರೆ. ಕೆಲವರಂತೂ ಸೊಪ್ಪುಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಜನರು ಗಗನಕ್ಕೇರಿರುವ ಬೆಲೆಯ ಬಗ್ಗೆ ಲೆಕ್ಕಾಚಾರ ಹಾಕತೊಡಗಿದ್ದಾರೆ.

ಸಾಂಬಾರ್‍ಗೆ ತರಕಾರಿ ಬಳಕೆ ಕಡಿಮೆ:
ತರಕಾರಿ ಬೆಲೆ ಏರಿಕೆಯಿಂದ ಮಹಿಳೆಯರಂತೂ ದಿನನಿತ್ಯ ಯಾವ ಅಡುಗೆ ಮಾಡುವುದು ಎಂಬ ಚಿಂತೆಗೀಡಾಗಿದ್ದಾರೆ. ತರಕಾರಿ ಬೆಲೆ ಎಷ್ಟೇ ಗಗನಕ್ಕೇರಿದರೂ ತಿನ್ನುವುದು ತಪ್ಪುವುದಿಲ್ಲ ಎಂದು ಮಹಿಳಾ ಗ್ರಾಹಕರ ವಾದವಾಗಿದೆ. ಕಾಯಿಪಲ್ಯ ಸವಿಯುತ್ತಿದ್ದವರು ಸೊಪ್ಪಿನ ಸಾರು ಮಾಡಲು ಮುಂದಾಗುತ್ತಿದ್ದಾರೆ.

ಅದರಲ್ಲೂ ಮದುವೆ ಸೀಜನ್ ಇರುವುದರಿಂದ ತರಕಾರಿ ಬೆಲೆ ಗಗನಕ್ಕೇರಿದ ಪರಿಣಾಮ ಬಡವರು ಹಾಗೂ ಮಧ್ಯಮ ವರ್ಗದವರು ಪಲ್ಯಗಳ ಬಗ್ಗೆ ಚಿಂತನೆ ಮಾಡುವಂತಾಗಿದೆ. ಹೀಗೆಯೇ ಬೆಲೆ ಹೆಚ್ಚಾಗುತ್ತಿದ್ದರೆ ಮದುವೆ ಊಟದ ಸಾಂಬರ್ಗೆ ತರಕಾರಿ ಬಳಕೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಅದರ ಬದಲಿಗೆ ತಿಳಿಸಾರು, ಅನ್ನ ಮಾಡಿ ಬಡಿಸುವುದು ಸೂಕ್ತ ಎಂದು ಅಡುಗೆ ಭಟ್ಟರ ಅಭಿಪ್ರಾಯವಾಗಿದೆ.

ಗ್ರಾಹಕರು ತರಕಾರಿ ಮತ್ತು ಸೊಪ್ಪು ಖರೀದಿ ಮಾಡಲು ಹೊರಟ ಸಂದರ್ಭದಲ್ಲಿ ಬೆಲೆ ಗಗನಕ್ಕೇರಿದೆ. ಬೇಸಿಗೆ ಮತ್ತು ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಯಾವುದೇ ಬೆಳೆ ಕೊಯ್ಲು ಹಾಗೂ ಇಳುವರಿಯಲ್ಲಿ ವ್ಯತ್ಯಯವಾಗಿದೆ. ಹಾಗಾಗಿ, ಮಾರುಕಟ್ಟೆಗೆ ತರಕಾರಿ ಸರಿಯಾದ ರೀತಿಯಲ್ಲಿ ಸರಬರಾಜು ಆಗುವಲ್ಲಿ ಅನಾನುಕೂಲವಾಗುತ್ತಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರು ಈರುಳ್ಳಿ ಎಷ್ಟು ಬೆಲೆ, ಹುರುಳಿಕಾಯಿ ಎಷ್ಟು ದರ, ಹೀರೇಕಾಯಿ ಎಷ್ಟು ಬೆಲೆ, ಕ್ಯಾರೆಟ್ ಹೇಗೆ ಎಂದು ಕೇಳುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬಂದಿತು. ಸೊಪ್ಪು, ತರಕಾರಿಗಳ ಬೆಲೆ ಕೇಳಿ ಗ್ರಾಹಕರಿಗೆ ಶಾಕ್ ಆಗಿದೆ. ಈಗಿನ ಮಾರುಕಟ್ಟೆಯಲ್ಲಿ ಈರುಳ್ಳಿ ಒಂದು ಕೆ.ಜಿ.ಗೆ 20ರೂ., ಆಲೂಗೆಡ್ಡೆ 20ರೂ., ಹುರುಳಿಕಾಯಿ ಕೆ.ಜಿ.ಗೆ ರೂ.120, ಕ್ಯಾರೆಟ್ 50ರೂ., ಟೊಮೆಟೋ 40ರೂ., ಕೊತ್ತುಂಬರಿ ಕೆ.ಜಿ.ಗೆ 100ರೂ., ಪುದೀನ ಕಟ್ಟು 20ರೂ., ಮೆಂತ್ಯೆ ಸೊಪ್ಪು 20ರೂ., ಸಬ್ಬಕ್ಕಿ 30ರೂ. ಮತ್ತು ದಂಟು, ಪಾಲಕ್, ಹರಿವೆ, ಚೊಕ್ಕೊತ ಸೊಪ್ಪು ಕಟ್ಟಿಗೆ 10ರೂ., ಬೆಳುಳ್ಳಿ 80ರೂ., ಮೆಣಸಿನಕಾಯಿ 100ರೂ., ಬದನೆಕಾಯಿ 40ರೂ., ಬೆಂಡೆಕಾಯಿ 40ರೂ., ತೊಂಡೆಕಾಯಿ 40ರೂ., ನವಿಲುಕೋಸು 40ರೂ., ಹೂಕೋಸು 30ರೂ., ಎಲೆಕೋಸು 30ರೂ., ಸೌತೇಕಾಯಿ ಕೆ.ಜಿ.ಗೆ 40ರೂ., ಕ್ಯಾಪ್ಸಿಕಂ 60ರೂ., ಬಟಾಣಿ 120ರೂ., ಮೂಲಂಗಿ 40ರೂ., ಶುಂಟಿ 120ರೂ., ಬೀಟ್ರೂಟ್ 40ರೂ., ನುಗ್ಗೆಕಾಯಿ 50 ರೂ. ಹಾಗೂ ಬೇಸಿಗೆ ಇರುವುದರಿಂದ ಒಂದು ನಿಂಬೆಹಣ್ಣಿಗೆ 5ರೂ.ನಂತೆ ದರ ಹೆಚ್ಚಿಸಿಕೊಂಡಿವೆ.

ಒಂದು ತಿಂಗಳಿನಿಂದ ತರಕಾರಿ ಹಾಗೂ ಆಹಾರ ಧಾನ್ಯಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ನಿನ್ನೆ ಇದ್ದ ಬೆಲೆ ಇಂದು ಇರುವುದಿಲ್ಲ, ಇಂದು ಇದ್ದ ಬಲೆ ನಾಳೆ ಇರುವುದಿಲ್ಲ. ನಿತ್ಯ ತರಕಾರಿ ಹಾಗೂ ಆಹಾರ ಪದಾರ್ಥಗಳ ಬೆಲೆಗಳು ಏರುತ್ತಲೇ ಇವೆ ಎಂದು ಗ್ರಾಹಕರ ಅಭಿಪ್ರಾಯವಾಗಿದೆ.

ತರಕಾರಿ ಬೆಲೆ:
ಕೊತ್ತಂಬರಿ ಸೊಪ್ಪು- ಒಂದು ಕಟ್ಟಿಗೆ 80ರೂ.ನಿಂದ 100ರೂ.
ನಿಂಬೆಹಣ್ಣು (ಒಂದಕ್ಕೆ)-10ರೂ.
ಬೀನ್ಸ್ (ಕೆಜಿಗೆ)-220ರೂ.
ಹಸಿಮೆಣಸಿನಕಾಯಿ (ಕೆಜಿಗೆ)- 80ರಿಂದ 100
ಈರುಳ್ಳಿ(ಕೆಜಿಗೆ) -30 ರಿಂದ 35
ಬದನೆಕಾಯಿ(ಕೆಜಿಗೆ) -100ರಿಂದ 110
ಬೀಟ್ರೋಟ್ (ಕೆಜಿಗೆ) -50ರಿಂದ 60
ಕ್ಯಾರೆಟ್ (ಕೆಜಿಗೆ) -80ರಿಂದ 100
ಬೆಂಡೆಕಾಯಿ (ಕೆಜಿಗೆ) -50ರಿಂದ 100
ಬೆಳ್ಳುಳ್ಳಿ(ಕೆಜಿಗೆ) – 150ರಿಂದ 160
ಟೊಮ್ಯಾಟೋ (ಕೆಜಿಗೆ) – 35ರಿಂದ 40
ಸೌತೆಕಾಯಿ (ಕೆಜಿಗೆ) -35ರಿಂದ 40

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ