ಬೆಂಗಳೂರು, ಜೂ.26- ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ, ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲದ ಅಡಿಯೋ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‍ಐಟಿ) ರಚಿಸಲು ಮೀನಾಮೇಶ ಎಣಿಸುತ್ತಿದೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಪರೇಷನ್ ಕಮಲದ ವಿಚಾರ ಹೆಚ್ಚು ಸದ್ದು ಮಾಡಿತ್ತು. ವಿಧಾನಸಭೆ ಸ್ಪೀಕರ್ ಹೆಸರು ಕೇಳಿ ಬಂದ ಕಾರಣಕ್ಕೆ ಸರ್ಕಾರ ಎಸ್‍ಐಟಿ ರಚನೆ ಮಾಡುವುದಾಗಿ ಹೇಳಿತ್ತು.
2019ರ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಎಸ್‍ಐಟಿ ರಚನೆ ಮಾಡುವ ಘೋಷಣೆಯನ್ನು ಸರ್ಕಾರ ಮಾಡಿತ್ತು.
ಆದರೆ, ಜೂನ್ ತಿಂಗಳು ಬಂದರೂ ಎಸ್‍ಐಟಿ ರಚನೆಯಾಗಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಈ ವಿಚಾರದಲ್ಲಿ ಒಂದಾಗಿದ್ದು, ಎಸ್‍ಐಟಿ ಯಾರಿಗೂ ಬೇಡವಾಗಿದೆ.
ಶಾಸಕರ ರಾಜೀನಾಮೆ ಪಡೆಯಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಲಂಚ ನೀಡಲಾಗುತ್ತದೆ ಎಂಬ ಆಪರೇಷನ್ ಕಮಲದ ಆಡಿಯೋ ಭಾರೀ ಸದ್ದು ಮಾಡಿತ್ತು. ವಿಧಾನಸಭೆಯಲ್ಲಿ ಈ ಕುರಿತು ಮೂರು ದಿನಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆದಿತ್ತು.
ಪ್ರತಿಪಕ್ಷ ಬಿಜೆಪಿ ಮತ್ತು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಈ ಆಡಿಯೋ ವಿವಾದವನ್ನು ಮರೆತು ಹೋಗಿವೆ. ಸದನದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ವಿವಿಧ ಪಕ್ಷಗಳ ರಾಜಕೀಯ ನಾಯಕರು ಈಗ ಏನೋ ಆಗಿಲ್ಲ ಎಂಬಂತೆ ಎಸ್‍ಐಟಿ ವಿಚಾರವನ್ನು ಮರೆತು ಹೋಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ
ಪ್ರತಿಪಕ್ಷ ಬಿಜೆಪಿ ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸಲು ಹೊರಟಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ್ದರು. ಜೆಡಿಎಸ್ ಶಾಸಕರನ್ನು ಸೆಳೆಯಲು ಮಾತುಕತೆ ನಡೆಸಿದ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದರು. ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಲಂಚ ನೀಡಲಾಗುತ್ತದೆ ಎಂಬ ವಿಚಾರ ಇದರಲ್ಲಿತ್ತು.ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಆಡಿಯೋ ಬಗ್ಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್, ಹಾದಿ ಬೀದಿಯಲ್ಲಿ ಹೋಗುವವರು ನನ್ನ ಹೆಸರು ಬಳಸಲು ಬಿಡುವುದಿಲ್ಲ.
ಆಡಿಯೋದಲ್ಲಿರುವ ಸಂಭಾಷಣೆ ಯಾರದ್ದು ಎಂದು ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ 15 ದಿನದಲ್ಲಿ ವರದಿ ನೀಡಬೇಕು. ಯಾವ ಸಂಸ್ಥೆ ಮೂಲಕ ತನಿಖೆ ಮಾಡಿಸಬೇಕು ಎಂದು ಸರ್ಕಾರ ತೀರ್ಮಾನಿಸಲಿ? ಎಂದು ಸ್ಪೀಕರ್ ಸಲಹೆ ನೀಡಿದ್ದರು.
ಎಸ್‍ಐಟಿ ತನಿಖೆಗೆ ಸರ್ಕಾರ ತೀರ್ಮಾನ
ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆದಿತ್ತು. ಅಂತಿಮವಾಗಿ ಸರ್ಕಾರ ಎಸ್‍ಐಟಿ ರಚನೆ ಮಾಡಿ ಆಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಫೆಬ್ರವರಿಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದವು, ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಎಸ್‍ಐಟಿ ರಚನೆಯೇ ಆಗಿಲ್ಲ.
ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆ ಎದುರಾಯಿತು. ಬಳಿಕ ಮೈತ್ರಿ ಸರ್ಕಾರದಲ್ಲಿ ಶಾಸಕರ ಬಂಡಾಯ, ಸಂಪುಟ ವಿಸ್ತರಣೆ ಎಂದು ಹಲವು ಚಟುವಟಿಕೆ ನಡೆದು ಎಲ್ಲರೂ ಆಪರೇಷನ್ ಕಮಲದ ಆಡಿಯೋ ವಿಚಾರ ಮರೆತಿದ್ದಾರೆ. ತಮ್ಮ ಹೆಸರು ಕೇಳಿ ಬಂದಿದ್ದರೂ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ನ್ಯಾಯಾಲಯ ತಡೆಯಾಜ್ಞೆ
ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗದ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್‍ಗೆ ಕಲಬುರಗಿ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು.
ಯಡಿಯೂರಪ್ಪ ಅವರಲ್ಲದೆ, ಉಳಿದ ಮೂವರು ಆರೋಪಿಗಳಾದ ಹಾಸನ ಶಾಸಕ ಪ್ರೀತಂಗೌಡ, ದೇವದುರ್ಗದ ಶಾಸಕ ಶಿವನಗೌಡ ಮತ್ತು ಪತ್ರಕರ್ತ ಮರಂಕಲ್ ಅವರೂ ಸದ್ಯ ಎಫ್‍ಐಆರ್‍ನಿಂದ ಪಾರಾಗಿದ್ದಾರೆ.
ಆಪರೇಷನ್ ಕಮಲ ನಡೆಸುವ ಪ್ರಯತ್ನದಲ್ಲಿ ಯಡಿಯೂರಪ್ಪ ಮತ್ತು ಮೂವರ ವಿರುದ್ಧ ದೇವದುರ್ಗ ಪೊಲೀಶ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.
ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರು ಅವರ ಮಗ ಶರಣಗೌಡ ನೀಡಿದ್ದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು.
ಇದನ್ನು ರದ್ದುಗೊಳಿಸುವಂತೆ ಕೋರಿ ಕಲಬುರಗಿ ಹೈಕೋರ್ಟ್‍ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಎಫ್‍ಐಆರ್‍ಗೆ ಮಧ್ಯಂತರ ತಡೆ ನೀಡಿದೆ.
ಗುರುಮಠಕಲ್ ಶಾಸಕ ನಾಗನಗೌಡ ಕುಂದಕೂರ ಅವರ ಪುತ್ರ ಶರಣಗೌಡ ಅವರು ಯಡಿಯೂರಪ್ಪ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಎಫ್‍ಐಆರ್ ದಾಖಲಿಸಲಾಗಿತ್ತು.