ವಾಣಿಜ್ಯ ಮಂಡಳಿಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಕಲ್ಪಿಸಿ-ಟೇಶಿ ವೆಂಕಟೇಶ್

ಬೆಂಗಳೂರು, ಜೂ.26- ಚಿತ್ರರಂಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಾಣಿಜ್ಯ ಮಂಡಳಿಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಕಲ್ಪಿಸಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯ ಗೌರವ ಕಾರ್ಯದರ್ಶಿ ಅಭ್ಯರ್ಥಿ ಟೇಶಿ ವೆಂಕಟೇಶ್ ಮನವಿ ಮಾಡಿದ್ದಾರೆ.

ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಒಂದು ತಂಡ ವಾಣಿಜ್ಯ ಮಂಡಳಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ತಮ್ಮನ್ನು ಆಯ್ಕೆ ಮಾಡಿದರೆ ಚಿತ್ರರಂಗದ ಅಭಿವೃದ್ಧಿಗೆ ದುಡಿಯುತ್ತೇವೆ ಇಲ್ಲಿ ಬೇಕಾಗಿರುವ ಬದಲಾವಣೆಗಾಗಿ ನಾವು ಶ್ರಮಿಸಲಿದ್ದೇವೆ .ಅದಕ್ಕೆ ನೀವು ಬೆಂಬಲ ನೀಡಿ ಎಂದರು.

ಇಂದು ಸುದ್ದಿಗೋಷ್ಠಿ ನಡೆಸಿದ ಟೇಶಿ ವೆಂಕಟೇಶ್ ಮತ್ತು ವಿತರಕರ ವಲಯದ ಅಭ್ಯರ್ಥಿ ಲಯನ್ ಎಸ್.ವೆಂಕಟೇಶ್ ಅವರು ಹಲವಾರು ವರ್ಷಗಳಿಂದ ವಾಣಿಜ್ಯ ಮಂಡಳಿಗೆ ಒಂದೇ ತಂಡದಿಂದ ಆಯ್ಕೆಯಾಗುತ್ತಿದ್ದಾರೆ. ಬೇರೆಯವರಿಗೆ ಅವಕಾಶ ನೀಡಿ ಅದರಿಂದ ಬದಲಾವಣೆ ಸಾಧ್ಯ ಎಂದರು.

ತಮಗೆ ವೋಟು ಹಾಕಿ ಚಿತ್ರರಂಗದ ಅಭಿವೃದ್ದಿಯೊಂದಿಗೆ ಚಿತ್ರರಂಗದ ಕಾರ್ಮಿಕರು, ಕಲಾವಿದರು, ನಿರ್ಮಾಪಕರು, ವಿತರಕರಾಗಿ ದುಡಿಯುತ್ತಿರುವ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲ್ಲಿದ್ದೇವೆ ಎಂದು ಭರವಸೆ ನೀಡಿದರು.

ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಚಿತ್ರರಂಗದವರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಲ್ಲಿ ಪ್ರಮುಖವಾದುದನ್ನು ಆದ್ಯತೆ ಮೇರೆಗೆ ಸರ್ಕಾರದೊಂದಿಗೆ ಚರ್ಚಿಸಿ ಕೆಲಸ ಮಾಡಿಸಲು ಕ್ರಮ ವಹಿಸುವುದಾಗಿ ಹೇಳಿದರು.

ಹಸಿವಿನಿಂದ ಬಳಲುವ ಚಿತ್ರರಂಗದವರಿಗಾಗಿ 10 ರೂ.ಗೆ ಊಟ ನೀಡುವ ವ್ಯವಸ್ಥೆಯನ್ನು ಸಿನಿ ಕ್ಯಾಂಟೀನ್ ಮೂಲಕ ಆರಂಭಿಸುವುದು, ಸಿನಿಮಾರಂಗದ ಸದಸ್ಯರನ್ನು ವಿಶೇಷ ವರ್ಗದ ಸದಸ್ಯರೆಂದು ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು. ಚಿತ್ರರಂಗ ಭವಿಷ್ಯದ ದೃಷ್ಟಿಯಿಂದ ಕೆಲವು ಕಟ್ಟುಪಾಡುಗಳು ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳುವುದು.

ಮೊದಲು ನಮ್ಮ ಪ್ರೊಫೆಷನ್‍ಗೆ ಬೆಲೆ ಕೊಡಿ ನಂತರ ನಮ್ಮಿಂದ ಪ್ರೊಫೆಷನಲ್ ಟ್ಯಾಕ್ಸ್ ವಸೂಲಿ ಮಾಡಿ ಎಂಬ ಮನವಿ ಮಾಡುವುದು, ಸುಮಾರು 200 ಚಿತ್ರಗಳನ್ನು ನಿರ್ಮಿಸುವ ಕನ್ನಡ ಚಿತ್ರರಂಗಕ್ಕೆ ಬೆಂಗಳೂರಿನಲ್ಲಿ ಪ್ರತ್ಯೇಕವಾದ ಯುಎಫ್‍ಒ ಮತ್ತು ಕ್ಯೂಬ್ ಕಂಟೆಂಟ್ ಟ್ರಾನ್ಸ್‍ಫಾರಿಂಗ್ ಯ್ಯೂನಿಟ್ ಹಾಕಿಸುವುದು, ನಿರ್ಮಾಪಕರಿಗೆ ಸರ್ಕಾರದಿಂದ ಸಲ್ಲಿಸಬೇಕಾದ ಸಹಾಯಧನ ತಡವಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಅನೇಕ ವಿಷಯಗಳು ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಬೆಸೆದು ದಕ್ಕ ಬೇಕಿರುವ ಸೌಲಭ್ಯ ಪಡೆಯಲು ಶ್ರಮಿಸುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ವಿತರಕ ಜಿ.ಕೆ.ಕುಟ್ಟಿ, ನಿರ್ದೇಶಕ ಟಿಪ್ಪು ವರ್ಧನ್, ವಿತರಕ ನಾರಾಯಣಮೂರ್ತಿ, ಅಚ್ಚು ರಾಮಚಂದ್ರ, ನಿರ್ಮಾಪಕಿ ಸುಮತಿ ಇದ್ದರು.

ಇದೇ 29ರಂದು ನಡೆಯುವ ವಾಣಿಜ್ಯ ಮಂಡಳಿ ವಿವಿಧ ವಿಭಾಗಗಳ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಣಾಳಿಕೆ ಬಿಡಗುಡೆಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ