ಟಿಕೆಟ್ ಪಡೆಯಲು ಆಕಾಂಕ್ಷಿಗಳ ಕಡೇ ಪ್ರಯತ್ನ

ಬೆಂಗಳೂರು, ಮಾ.27- ಅತ್ತ ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸುತ್ತಿದ್ದಂತೆ ಇತ್ತ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಟಿಕೆಟ್ ಪಡೆಯಲು ಆಕಾಂಕ್ಷಿಗಳು ಕಡೇ ಪ್ರಯತ್ನ ನಡೆಸಿದ್ದಾರೆ. ಟಿಕೆಟ್ ಖಚಿತವಾಗಿರುವ ಅಭ್ಯರ್ಥಿಗಳು ಮತದಾರರ ಮನವೊಲಿಕೆ ಬಿರುಸುಗೊಳಿಸಿದ್ದಾರೆ. ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಸಭೆಗಳ ಮೇಲೆ ಸಭೆ ನಡೆಯುತ್ತಿವೆ.

ಅಭ್ಯರ್ಥಿಗಳ ಆಯ್ಕೆ, ಪ್ರಚಾರ, ರ್ಯಾಲಿ, ಸಭೆ-ಸಮಾರಂಭಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆ ಪ್ರಣಾಳಿಕೆ ಬಿಡುಗಡೆ ದಿನಾಂಕದ ಬಗ್ಗೆ ಮಾತುಕತೆ ನಡೆದಿದೆ.
ಜೆಡಿಎಸ್ ಈಗಾಗಲೇ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈವರೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಏಪ್ರಿಲ್ ಮೊದಲ ವಾರದಲ್ಲಿ ಎರಡೂ ಪಕ್ಷಗಳು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳ ಮುಖಂಡರು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮಿಕ್ಸಿ, ಕುಕ್ಕರ್, ಹಣ ಸೇರಿದಂತೆ ಹಲವು ಉಡುಗೊರೆಗಳನ್ನು ರಾಜಕೀಯ ನಾಯಕರು ಮತದಾರರಿಗೆ ಎಲ್ಲೆಡೆ ಬಹಿರಂಗವಾಗಿಯೇ ಹಂಚುತ್ತಿದ್ದುದು ಕಂಡುಬಂತು.

ನೀತಿಸಂಹಿತೆ ಜಾರಿಯಾಗುವುದರಿಂದ ಇನ್ನೂ ಬಹಿರಂಗವಾಗಿ ಹಂಚಲು ಸಾಧ್ಯವಿಲ್ಲ. ಈಗಾಗಲೇ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಸಾಕಷ್ಟು ಕಸರತ್ತು ನಡೆಸಿದ್ದು, ಇನ್ನು ಮುಂದೆ ಮತ್ತಷ್ಟು ಕಸರತ್ತು ನಡೆಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಿದ್ದಾರೆ.
ಮಾರ್ಚ್ ಕೊನೆ ವಾರದಲ್ಲಿ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ ಇದ್ದಿದ್ದರಿಂದ ಬಹುತೇಕ ರಾಜಕೀಯ ಪಕ್ಷಗಳು ಈಗಾಗಲೇ ರಾಜ್ಯಾದ್ಯಂತ ಪ್ರವಾಸ, ಬೃಹತ್ ರ್ಯಾಲಿ, ರೋಡ್ ಶೋಗಳನ್ನು ಮಾಡಿ ಮುಗಿಸಿವೆ. ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಶಾಸಕರು, ಆಕಾಂಕ್ಷಿಗಳು ವಿವಿಧ ಉಡುಗೊರೆಗಳ ಮೂಲಕ ಮತದಾರರನ್ನು ಆಕರ್ಷಿಸುವ ಕೆಲಸ ಮಾಡಿದ್ದಾರೆ.

ಸಾಕಷ್ಟು ಅಭಿವೃದ್ಧಿ ಕೆಲಸಗಳ ಉದ್ಘಾಟನೆ, ಶಂಕುಸ್ಥಾಪನೆ ಕೂಡ ನೆರವೇರಿದೆ. ಇನ್ನು ಮುಂದೆ ಮನೆಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುವ ಕೆಲಸ ಮಾಡಬೇಕಿದೆ. ಟಿಕೆಟ್‍ಗಾಗಿ ಫೈಟ್ ಕೂಡ ಮಾಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ