ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾತಿನ ಚಕಮಕಿ

ಬೆಂಗಳೂರು, ಮಾ.27- ಅಭ್ಯರ್ಥಿಗಳ ಆಯ್ಕೆ ಕಸರತ್ತು ಕಾಂಗ್ರೆಸ್‍ನಲ್ಲಿ ಜೋರಾಗಿಯೇ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿನ್ನೆ ನಡೆದ ಚುನಾವಣಾ ಆಯ್ಕೆ ಸಮಿತಿ ಸಭೆಯಲ್ಲಿ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡುವ ಬಗ್ಗೆ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ, ಅಶೋಕ್ ಖೇಣಿ ಸೇರಿದಂತೆ ಹಲವರಿಗೆ ಟಿಕೆಟ್ ನೀಡುವ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಾಲಿ ಕ್ಷೇತ್ರಗಳಲ್ಲಿ ಈ ಹಿಂದೆ ಪರಾಜಿತಗೊಂಡ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರಿದರೆ ಹೊರಗಿನಿಂದ ಬಂದವರಿಗೆ ಅವಕಾಶ ಕೊಡಿ. ಹಾಲಿ ಇರುವವರೇ ಸ್ಪರ್ಧೆಗೆ ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಏಕೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬಂದಿವೆ.
80 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಲಾಗಿದ್ದು, ಪಟ್ಟಿಯಲ್ಲಿ ಒಬ್ಬೊಬ್ಬರ ಹೆಸರನ್ನೇ ಕಳುಹಿಸಲಾಗಿದೆ. 50 ಕ್ಷೇತ್ರಗಳಲ್ಲಿ ಇಬ್ಬರ ಹೆಸರುಗಳನ್ನು ಕಳುಹಿಸಲಾಗಿದೆ. ಇನ್ನೂ 20 ಕ್ಷೇತ್ರಗಳಲ್ಲಿ ನಿಷ್ಕ್ರಿಯರಾಗಿರುವ, ಅನಾರೋಗ್ಯಕ್ಕೀಡಾಗಿರುವ 20 ಕ್ಷೇತ್ರಗಳಲ್ಲಿ 3 ರಿಂದ 4 ಜನರ ಹೆಸರನ್ನು ಶಿಫಾರಸು ಮಾಡಿ ಕಳುಹಿಸಲಾಗಿದ್ದು, ಹೈಕಮಾಂಡ್ ಸದ್ಯದಲ್ಲೇ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಿದೆ.

ನಿನ್ನೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಚರ್ಚೆ ತೀವ್ರ ವಿವಾದ ಸ್ವರೂಪ ಪಡೆಯದಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಹಿಂಬಾಲಕರನ್ನು ಎತ್ತಿ ಕಟ್ಟಿ ಗೊಂದಲ ಉಂಟುಮಾಡುವ ನಾಯಕರುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದಾರೆ.

ಟಿಕೆಟ್ ಕೈ ತಪ್ಪಿದವರು ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಏನಾದರೂ ಕಾರಣರಾದರೆ ಅಂತಹವರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲು ಪಕ್ಷ ಹಿಂದೆ ಮುಂದೆ ನೋಡುವುದಿಲ್ಲ. ನಾನು ಉಸ್ತುವಾರಿ ವಹಿಸಿಕೊಂಡ ಮೇಲೆ ಒಮ್ಮೆ ಅಮಾನತು ಮಾಡಿದವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ