ಬೆಂಗಳೂರು, ಜೂ.24- ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರದ ನಾಯಕರ ನಡುವಿನ ಬೀದಿ ಜಗಳವನ್ನು ನೋಡುತ್ತಿರುವ ಜನ ಹಿಡಿಶಾಪ ಹಾಕುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಮುಕ್ತಿ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಸರ್ಕಾರಿ ಇಲಾಖೆಗಳಲ್ಲಿ ಪ್ರತಿ ನಿತ್ಯವೂ ಲೂಟಿ ನಡೆಯುತ್ತಿದೆ. ಆದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಭಾಷಣ ಬಿಗಿಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಶೀಘ್ರದಲ್ಲೇ ಜನಪ್ರತಿನಿಧಿಗಳೇ ಮುಕ್ತಿಕೊಡಲಿದ್ದಾರೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯ ಕುರಿತಂತೆ ಬಿಜೆಪಿ ಹೊರ ತಂದಿರುವ “ಅಂದು… ಗ್ರಾಮ ವಾಸ್ತವ್ಯ-ಶೂನ್ಯ ಸಾಧನೆ ಈವರೆಗೆ… ಸ್ಟಾರ್ ಹೋಟೆಲ್ನಿಂದ ಆಡಳಿತ ಖಜಾನೆ ಲೂಟಿ… ಈಗ… ಮತ್ತೆ ಗ್ರಾಮ ವಾಸ್ತವ್ಯದ ಡ್ರಾಮಾ !” ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಯಡಿಯೂರಪ್ಪನವರ ಕನಸುಗಳಿಗೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹೇಳಿಕೆಗೆ ಟಾಂಗ್ಕೊಟ್ಟ ಯಡಿಯೂರಪ್ಪ, ವಾಸ್ತವವಾಗಿ ಸಿಎಂ ಕುರ್ಚಿ ಕನಸು ಕಾಣುತ್ತಿರುವುದೇ ಸಿದ್ದರಾಮಯ್ಯ. ನಾನು ಈಗಾಗಲೇ ಆ ಕುರ್ಚಿಯನ್ನು ನೋಡಿ ಬಿಟ್ಟಿದ್ದೇನೆ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಕಾರಣಕ್ಕಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿನಾಃಕಾರಣ ಬಿಜೆಪಿ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿಲ್ಲ. ಆದರೆ, ಸಿದ್ದರಾಮಯ್ಯನವರಿಗೆ ನನ್ನ ಬಗ್ಗೆ ಏಕೆ ಇಂತಹ ಕನಸು ಬಿದಿದ್ದೆಯೋ ಗೊತ್ತಿಲ್ಲ. ಮೊದಲು ಅವರು ಪುನಃ ಮುಖ್ಯಮಂತ್ರಿಯಾಗಬೇಕೆಂಬ ಕನಸು ಬಿಟ್ಟುಬಿಡಲಿ ಎಂದು ಟಾಂಗ್ ನೀಡಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದ ವೇಳೆ 20 ತಿಂಗಳು ನಮ್ಮ ಜತೆ ಸೇರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಗ್ರಾಮಗಳು ಈಗಲೂ ಕೂಡ ಏನೇನೂ ಅಭಿವೃದ್ಧಿಯಾಗಿಲ್ಲ. ಕಡೆ ಪಕ್ಷ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕೂಡ ಕೊಟ್ಟಿಲ್ಲ. ನೀವು ಯಾವ ಪುರುಷಾರ್ಥಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ನಾನು ಕುಮಾರಸ್ವಾಮಿ ಮೇಲೆ ವಿನಾಃಕಾರಣ ಆರೋಪ ಮಾಡುತ್ತಿಲ್ಲ. ನಿಖರವಾಗಿ ಮಾಹಿತಿ ಪಡೆದು ಅವರು ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ ತಿಳಿದೇ ಮಾತನಾಡಿದ್ದೇನೆ. ಗ್ರಾಮ ವಾಸ್ತವ್ಯ ಒಂದು ಗಿಮಿಕ್ ಹೊರತು ಬೇರೇನೂ ಅಲ್ಲ ಎಂದು ಕುಹುಕವಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಯುವ ಮೋರ್ಚ ರಾಜ್ಯ ಪ್ರಧಾನಕಾರ್ಯದರ್ಶಿ ಬಿ.ವೈ.ರಾಘವೇಂದ್ರ, ತಮ್ಮೇಶ್ಗೌಡ, ಪಕ್ಷದ ಸಹ ವಕ್ತಾರ ಎ.ಎಚ್.ಆನಂದ್ ಮತ್ತಿತರರು ಉಪಸ್ಥಿತರಿದ್ದರು.