ಸಿಎಂ ಕುಮಾರಸ್ವಾಮಿಯವರಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿರುವ ಬಿಜೆಪಿ

ಬೆಂಗಳೂರು, ಜೂ.24- ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿ ಪಕ್ಷ ಬಿಜೆಪಿ ಹತ್ತು ಪ್ರಶ್ನೆಗಳನ್ನು ಮುಂದಿಟ್ಟು, ಇದರಿಂದ ರಾಜ್ಯಕ್ಕೆ ಯಾವಾಗ ಮುಕ್ತ ಎಂದು ಪ್ರಶ್ನಿಸಿದೆ.

“ಅಂದು… ಗ್ರಾಮ ವಾಸ್ತವ್ಯ-ಶೂನ್ಯ ಸಾಧನೆ ಈವರೆಗೆ… ಸ್ಟಾರ್ ಹೋಟೆಲ್‍ನಿಂದ ಆಡಳಿತ ಖಜಾನೆ ಲೂಟಿ… ಈಗ… ಮತ್ತೆ ಗ್ರಾಮ ವಾಸ್ತವ್ಯದ ಡ್ರಾಮಾ !” ಎನ್ನುವ ಕಿರುಹೊತ್ತಿಗೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

ಒಟ್ಟು 23 ಪುಟಗಳ ಈ ಕಿರುಹೊತ್ತಿಗೆಯಲ್ಲಿ ಈ ಹಿಂದೆ ಕುಮಾರಸ್ವಾಮಿ ಅವರು ಎಲ್ಲೆಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು, ಈಗ ಈ ಗ್ರಾಮಗಳ ಸ್ಥಿತಿಗತಿ ಹೇಗಿದೆ ? ಕುಡಿಯುವ ನೀರು, ಚರಂಡಿ, ಬೀದಿ ದೀಪ, ರಸ್ತೆ, ಶಾಲೆಗಳು, ಮೂಲಭೂತ ಸೌಕರ್ಯ ಸೇರಿದಂತೆ ಆಗ್ರಾಮಗಳ ಅಭಿವೃದ್ಧಿಗೆ ಏನು ಮಾಡಲಾಗಿದೆ ಎಂಬುದನ್ನು ವಿವರಿಸಲಾಗಿದೆ.

ಇದೇ ವೇಳೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಇದಕ್ಕೆ ನಿಮ್ಮಿಂದ ಉತ್ತರ ಬಯಸುವುದಾಗಿ ಹೇಳಿದೆ.

ಪ್ರಶ್ನೆಗಳು:
1.ಹದಿಮೂರು ತಿಂಗಳ ತಾಜ್‍ವೆಸ್ಟ್‍ಎಂಡ್ ಸ್ಟಾರ್ ಹೋಟೆಲ್‍ನಲ್ಲಿ ವಿಲಾಸಿ ಆಡಳಿತ ನಡೆಸುವಾಗಲೇ 1500 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ನಿಮ್ಮ ಉತ್ತರವೇನು?

2.ರೈತರ 48ಸಾವಿರ ಕೋಟಿ ಸಾಲ ಮನ್ನಾ 24 ಗಂಟೆಗಳಲ್ಲಿ ಮಾಡುತ್ತೇನೆ ಎಂದು ಹೇಳಿದ್ದ ತಾವು 13 ತಿಂಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಜತೆಗೆ ಹೊಸ ಸಾಲವನ್ನೂ ನೀಡಲಿಲ್ಲ. ಋಣಮುಕ್ತ ಪತ್ರ ಕೊಡುತ್ತೇನೆ ಎಂದು ಭಾಷಣ ಬಿಗಿಯುತ್ತೀರಿ, ಕಣ್ಣೀರು ಸುರಿಸುತ್ತೀರಿ. ಇಂತಹ ಡ್ರಾಮಗಳನ್ನು ಜನರು ನಂಬಬೇಕೆ?

3. ರಾಜ್ಯಾದ್ಯಂತ ಬರದ ಛಾಯೆಯಿಂದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ದನಕರುಗಳು, ಪಶು-ಪಕ್ಷಿಗಳಿಗೆ ಮೇವು, ನೀರಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ ಜನ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ರಾಮ ವಾಸ್ತವ್ಯದ ನಾಟಕ ಸರಿಯೇ ?

4. ಐಎಂಎ ಹಗರಣದಲ್ಲಿ ಆರು ಸಾವಿರ ಕೋಟಿ ಅಲ್ಪಸಂಖ್ಯಾತ ಬಡಜನರ ಹಣದೊಂದಿಗೆ ಪರಾರಿಯಾದ ಮುನ್ಸೂರ್ ಅಹಮ್ಮದ್ ಜತೆ ಬಿರಿಯಾನಿ ಊಟ ಮಾಡಿದ ನೀವು ಈ ಹಗರಣವನ್ನು ಸಿಬಿಐಗೆ ಕೊಡಬೇಕೆಂದು ಶೋಷಣೆಗೊಳಗಾಗಿರುವ ಅಲ್ಪಸಂಖ್ಯಾತರು ಮತ್ತು ವಿಪಕ್ಷವೂ ಕೂಡ ಬೇಡಿಕೆ ಮಂಡಿಸಿದ್ದರೂ ಏಕೆ ಮೌನ ವಹಿಸಿದ್ದೀರಿ ? ನಿಮ್ಮ ಶಾಸಕರಾದ ರೋಷನ್ ಬೇಗ್ ಮತ್ತು ಸಚಿವ ಜಮೀರ್ ಅಹಮ್ಮದ್ ವಿರುದ್ಧ ಕ್ರಮ ಜರುಗಿಸುವ ಧೈರ್ಯವಿದೆಯೇ ?

5. ರಾಜ್ಯದಲ್ಲಿ ಸಾವಿರಾರು ಶಾಲಾ ಕಾಲೇಜುಗಳ ಸುಣ್ಣಬಣ್ಣ ಬಳಿಯಲು, ಶೌಚಾಲಯಗಳಿಗೆ ಹಣವಿಲ್ಲ. ವಿವಿಗಳಿಗೆ ಹಣಕಾಸು ನೆರವು ನೀಡುತ್ತಿಲ್ಲ. 40ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ, ವೈದ್ಯರಿಗೆ ವೇತನ ಕೊಡುತ್ತಿಲ್ಲ. ಸಮವಸ್ತ್ರ, ಬೈಸಿಕಲ್, ಶೂ ಸಿಕ್ಕಿಲ್ಲ. ಈಗ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಜ್ಞಾನೋದಯ ಸ್ಟಾರ್ ಹೋಟೆಲ್‍ನಲ್ಲಿ ಆಯಿತೆ ?

6. ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪೆನಿಗೆ 3667 ಎಕರೆ ಜಮೀನನ್ನು ಕೇವಲ 1.22ಲಕ್ಷ ರೂ.ಗೆ ಒಂದು ಎಕರೆಯಂತೆ ಅತಿ ಕನಿಷ್ಠ ಬೆಲೆಗೆ ಮಾರಾಟ ಮಾಡಲು ನೀವು ಪಡೆದಿರುವ ಕಿಕ್‍ಬ್ಯಾಕ್ ಎಷ್ಟು ?

7. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಪ್ರಗತಿಯಾಗಿರುವ ಈ ದಿನಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿಯೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಗ್ರಾಮ- ಡ್ರಾಮಾ ಏಕೆ ? ಇದು ಪ್ರಚಾರದ ಗಿಮಿಕಲ್ಲವೆ ? ಹಿಂದಿನ ಗ್ರಾಮ ವಾಸ್ತವ್ಯ ಸಾಧನೆಯ ಶ್ವೇತ ಪತ್ರ ನೀಡುವಿರಾ ?

8. ಮುಖ್ಯಮಂತ್ರಿಗಳೇ ದಿಕ್ಕು ತಪ್ಪಿದ ಆಡಳಿತ ಮತ್ತು ದಿನನಿತ್ಯ ನಿಮ್ಮ ಮೈತ್ರಿ ಪಕ್ಷಗಳ ಬೀದಿ ಜಗಳದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮುಕ್ತಿ ಯಾವಾಗಾ ?

9. ನಿಮ್ಮ ಕನಸಿನ ಬಜೆಟ್ ಕೆಲವೇ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿ, ಈಗ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿವೆ ಎಂದು ಗ್ರಾಮ ವಾಸ್ತವ್ಯ ಮಾಡುವ ನೀವು ಬಜೆಟ್‍ನಲ್ಲಿ ಎಷ್ಟು ಹಣವಿಟ್ಟಿದ್ದೀರಿ. ಸರ್ಕಾರದಲ್ಲಿ ನಿಮ್ಮ ಘೋಷಣೆಗಳನ್ನು ಪೂರ್ತಿ ಮಾಡಲು ಹಣ ಎಲ್ಲಿಂದ ತರುತೀರಿ ?

10. ಕಾಂಗ್ರೆಸ್-ಜೆಡಿಎಸ್‍ನ ಸಮ್ಮಿಶ್ರ ಸರ್ಕಾರದ ನಾಯಕರ ನಡುವಿನ ಬೀದಿ ಜಗಳವನ್ನು ಟಿವಿ, ಪತ್ರಿಕೆಗಳಲ್ಲಿ ನೋಡಿ ಜನರು ಶಾಪ ಹಾಕುತ್ತಿದ್ದಾರೆ. ಸರ್ಕಾರದ ಇಲಾಖೆಗಳಲ್ಲಿ ಹಗಲು ಲೂಟಿ ಹೆಚ್ಚು ನಡೆಯುತ್ತಿದೆ. ಆದರೂ ಸಿಎಂ ಅವರೇ ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಎಂದು ಭಾಷಣ ಬಿಗಿಯೂತ್ತೀರಿ. ಇಂತಹ ಭ್ರಮೆಗೆ ಮುಕ್ತಿ ಯಾವಾಗ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ