ಬೆಂಗಳೂರು,ಜೂ.22- ಜೆಡಿಎಸ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳದೆ ಇದ್ದರೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸುಮಾರು 15 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಉರಿಯುತ್ತಿರುವ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಹೀಗಾಗಿಯೇ ಜನರಿಗೆ ಸರ್ಕಾರದ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯ ಬರಲಿಲ್ಲ. ಚುನಾವಣೆ ಸೋಲಿಗೆ ಇದು ಕೂಡ ಕಾರಣವಾಯಿತು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರೆ ಹೀನಾಯವಾಗಿ ಸೋಲುವ ಸಂದರ್ಭವೇ ಇರುತ್ತಿರಲಿಲ್ಲ. ಮೈತ್ರಿಯ ಬಗ್ಗೆ ನಾನು ಆರಂಭದಲ್ಲೇ ಕೆಪಿಸಿಸಿಗೆ ನನ್ನ ವಿರೋಧ ವ್ಯಕ್ತಪಡಿಸಿದ್ದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಧನೆಯಾಗಿದೆ. ಪಕ್ಷ ಸಂಘಟನೆಯ ಬಗ್ಗೆ ಗಮನವನ್ನೇ ಕೊಡುತ್ತಿಲ್ಲ. ಹೀಗಾದರೆ ಮುಂದಿನ ಚುನಾವಣೆಗಳಲ್ಲೂ ನಮಗೆ ಹಿನ್ನಡೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಅನುಮಾನಗಳು ಕೇಳಿಬರುತ್ತಲೇ ಇವೆ. ಅದನ್ನು ಕರಾರುವಕ್ಕಾಗಿ ನಿರೂಪಿಸಬೇಕಾದರೆ ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಯಬೇಕು. ಈ ಚುನಾವಣೆಯಲ್ಲಂತೂ ನಾವು ಸೋತಿದ್ದಾಗಿದೆ. ಫಲಿತಾಂಶದ ನಂತರವಾದರೂ ಎರಡು ಪಕ್ಷಗಳ ನಾಯಕರು ಸೋಲಿಗೆ ಪರಾಮರ್ಶೆ ನಡೆಸಬೇಕಿತ್ತು. ಆದರೆ ಆ ಪ್ರಯತ್ನಗಳು ಆಗಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಸರ್ಕಾರದ ಬಗ್ಗೆ ಹೇಳಿಕೆಗಳನ್ನು ನೀಡುತ್ತಾರೆ. ಮತ್ತೆ ಅವರ ಹೇಳಿಕೆಗಳನ್ನು ಬದಲಾವಣೆ ಮಾಡುತ್ತಾರೆ. ಆದರೆ ಕಾಂಗ್ರೆಸಿಗರು ಅವರಂತೆ ಮಾತನಾಡಲು ಸಾಧ್ಯವಿಲ್ಲ. ದೇವೇಗೌಡರು ಹೇಳಿದಂತೆ ಯಾವ ಶಾಸಕರು ಮಧ್ಯಂತರ ಚುನಾವಣೆಗೆ ಸಿದ್ದವಿಲ್ಲ. ಒಂದು ವೇಳೆ ಚುನಾವಣೆಗೆ ಹೋದರೂ ಜನ ಸಹಿಸುವುದಿಲ್ಲ ಎಂದರು.
ಬಿಜೆಪಿಯವರು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಸದಾಕಾಲ ಪ್ರಯತ್ನಿಸುತ್ತಲೇ ಇರುತ್ತಾರೆ. ಹಣ್ಣುಗಳಿರುವ ಮರವನ್ನು ಪ್ರತಿ ಬಾರಿ ಅಲ್ಲಾಡಿಸುವುದು ಅವರ ಅಭ್ಯಾಸ ಎಂದು ಮೊಯ್ಲಿ ಲೇವಡಿ ಮಾಡಿದರು.