ಈವರೆಗೂ ನೂತನ ಸಚಿವರಿಗೆ ಹಂಚಿಕೆಯಾಗದ ಖಾತೆ

ಬೆಂಗಳೂರು,ಜೂ.22-ಸಚಿವ ಸಂಪುಟ ವಿಸ್ತರಣೆಯಾಗಿ ವಾರ ಕಳೆದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಾಧ್ಯವಾಗದೆ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಕಗ್ಗಂಟಿನ ಪರಿಸ್ಥಿತಿ ಉಂಟಾಗಿದೆ.

ಕಳೆದ ಜೂ.14ರಂದು ಸಚಿವ ಸಂಪುಟ ವಿಸ್ತರಣೆಯಾಗಿ ಪಕ್ಷೇತರ ಶಾಸಕರಾಗಿರುವ ಮುಳಬಾಗಿಲಿನ ನಾಗೇಶ್, ರಾಣೆಬೆನ್ನೂರಿನ ಆರ್.ಶಂಕರ್ ಅವರನ್ನು ನೂತನ ಸಚಿವರನ್ನಾಗಿ ನೇಮಿಸಲಾಗಿದೆ. ಆದರೆ ಈ ಇಬ್ಬರು ಸಚಿವ ಸ್ಥಾನ ಪಡೆದು ಎಂಟು ದಿನ ಕಳೆದರೂ ಈವರೆಗೂ ಖಾತೆ ಹಂಚಿಕೆ ಮಾಡಿಲ್ಲ.

ಕಾಂಗ್ರೆಸ್‍ನಿಂದ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅಕಾಲಿಕ ನಿಧನದಿಂದ ಅವರು ನಿರ್ವಹಿಸುತ್ತಿದ್ದ ಪೌರಾಡಳಿತ ಖಾತೆ ಉಳಿದುಕೊಂಡಿದ್ದು ಅದನ್ನು ಕಾಂಗ್ರೆಸ್ ಕೋಟಾದಲ್ಲಿ ಸಚಿವರಾಗಿರುವ ಆರ್.ಶಂಕರ್ ಅವರಿಗೆ ನೀಡಬೇಕು ಎಂಬ ಚಿಂತನೆ ಇತ್ತು.

ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿ ಇರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಖಾತೆಯನ್ನು ಹಿಂಪಡೆದು ಜೆಡಿಎಸ್ ಕೋಟಾದಿಂದ ಸಚಿವರಾಗಿರುವ ನಾಗೇಶ್ ಅವರಿಗೆ ಕೊಡಬೇಕು ಎಂಬ ಪ್ರಯತ್ನಗಳು ನಡೆದಿದ್ದವು.

ಆದರೆ ನೂತನ ಸಚಿವರಿಬ್ಬರು ಪ್ರಭಾವಿ ಖಾತೆಗಳೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ನಾಗೇಶ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಮೇಲೆ ಕಣ್ಣಿಟ್ಟಿದ್ದರೆ ಶಂಕರ್ ಅವರು ಅಬಕಾರಿ, ಅರಣ್ಯ ಅಥವಾ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಇಂಧನ ಖಾತೆ ಜೆಡಿಎಸ್ ಪಾಲಿಗೆ ಹಂಚಿಕೆಯಾಗಿದ್ದು, ಸದ್ಯಕ್ಕೆ ಮುಖ್ಯಮಂತ್ರಿ ಅವರ ಬಳಿ ಇದೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಈ ಖಾತೆಯ ಕಾರ್ಯ ನಿರ್ವಹಿಸಿದ್ದರು. ಅದನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದೆ. ಡಿ.ಕೆ.ಶಿವಕುಮಾರ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಖಾತೆಯನ್ನು ಬಿಟ್ಟುಕೊಡಬೇಕಾದರೆ ಇಂಧನ ಖಾತೆಯನ್ನು ಕಾಂಗ್ರೆಸ್‍ಗೆ ವಾಪಸ್ ನೀಡಬೇಕೆಂಬ ಷರತ್ತುಗಳಿವೆ.

ಹೀಗಾಗಿ ಖಾತೆ ಹಂಚಿಕೆ ಕಗ್ಗಂಟಾಗಿದೆ.ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ವಿಶ್ವನಾಥ್ ಅವರು ಮೊನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಸಚಿವರಿಗೆ ಕಚೇರಿ ಕೊಟ್ಟಿದ್ದೀರ. ಖಾತೆ ಕೊಟ್ಟಿಲ್ಲ. ಖಾಲಿ ಕೊಠಡಿಯಲ್ಲಿ ಕುಳಿತು ಅವರು ಏನು ಮಾಡಬೇಕು ಎಂದು ಮೊನಾಚಾಗಿ ಪ್ರಶ್ನಿಸಿದ್ದರು.

ಗ್ರಾಮ ವಾಸ್ತವ್ಯಕ್ಕೆ ತೆರಳುವ ಮುನ್ನ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಜೆ ವೇಳೆಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಸಿಎಂ ಭರವಸೆ ನೀಡಿ ನಾಲ್ಕು ದಿನ ಕಳೆದರೂ ಈವರೆಗೂ ಖಾತೆ ಹಂಚಿಕೆಯಾಗಿಲ್ಲ.

ಕಾಂಗ್ರೆಸ್ ಹೈಕಮಾಂಡ್‍ನ ಪೂರ್ವಾನುಮತಿ ಇಲ್ಲದೆ ಖಾತೆಗಳ ಮರುಹಂಚಿಕೆ ಸಾಧ್ಯವಿಲ್ಲ ಎಂಬ ಮಾತುಗಳಿವೆ. ಜೆಡಿಎಸ್ ತನ್ನ ಪಾಲಿನ ಒಂದು ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಬೆಂಬಲದಿಂದ ಶಾಸಕರಾಗಿರುವ ನಾಗೇಶ್ ಅವರು ಅದಕ್ಕೆ ನೇಮಕವಾಗಿದ್ದಾರೆ. ಮೂರನೇ ಒಂದು ಭಾಗದ ಅಧಿಕಾರದ ಸೂತ್ರವನ್ನು ಕಾಂಗ್ರೆಸ್ ಪಾಲಿಸುತ್ತಿಲ್ಲ ಎಂದು ದೇವೇಗೌಡರು ನಿನ್ನೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಖಾತೆ ಹಂಚಿಕೆಯಲ್ಲೂ ಎರಡೂ ಪಕ್ಷಗಳಲ್ಲೂ ತಗಾದೆ ಆರಂಭವಾಗಿದೆ.ಪರಸ್ಪರ ಕುಳಿತು ಚರ್ಚೆ ಮಾಡದೆ ಇರುವುದರಿಂದ ಪರಿಸ್ಥಿತಿ ಮುಗುಮ್ಮಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಗ್ರಾಮವಾಸ್ತವ್ಯ ಮುಗಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಂಜೆಯೊಳಗೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ