ಬೆಂಗಳೂರು,ಜೂ.21- ಮಾಜಿ ಪ್ರಧಾನಿ ದೇವೇಗೌಡರು ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಹಿರಂಗ ಹೇಳಿಕೆ ನೀಡಿ, ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು ಎಂದು ಹೇಳಿರುವುದಕ್ಕೆ ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ರಾಹುಲ್ಗಾಂಧಿ ಅವರ ಆದೇಶದ ಮೇಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಅದಕ್ಕಾಗಿ ನಾವೆಲ್ಲ ಹಲ್ಲು ಕಚ್ಚಿಕೊಂಡಿದ್ದೇವೆ. ಜೆಡಿಎಸ್ ಪಕ್ಷಕ್ಕೆ ಸರ್ಕಾರ ಬೇಡ ಎಂದಾದರೆ ನಾವು ಕೂಡ ಚುನಾವಣೆಗೆ ಸದಾ ಸಿದ್ಧರಿದ್ದೇವೆ. ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ನಡೆಯಿರಿ ಎಂದು ಕಾಂಗ್ರೆಸ್ ಶಾಸಕರು ಸವಾಲೆಸೆದಿದ್ದಾರೆ.
ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿಯೇ ಮೈತ್ರಿ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ ಶಾಸಕರನ್ನು ಮಲತಾಯಿ ಮಕ್ಕಳಂತೆ ನಡೆಸಿಕೊಳ್ಳಲಾಗುತ್ತಿದೆ. ಆದರೂ ನಾವ್ಯಾರು ಬಾಯ್ಬಿಟ್ಟು ಮಾತನಾಡಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ನಾಯಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅದು ಪಕ್ಷಗಳ ಅಧಿಕೃತ ಹೇಳಿಕೆಯಲ್ಲ.
80 ಸ್ಥಾನಗಳನ್ನು ಗಳಿಸಿ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದರೂ ಜೆಡಿಎಸ್ನವರು ಈಗಲೂ ಅತೃಪ್ತಿ ವ್ಯಕ್ತಪಡಿಸುವುದಾದರೆ ಅದನ್ನು ಕಾಂಗ್ರೆಸ್ ಪಕ್ಷ ಹೇಗೆ ಸಹಿಸಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಸುಮಾರು 18ರಿಂದ 20 ಮಂದಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಲು ಸಿದ್ದತೆ ನಡೆಸಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ದೇವೇಗೌಡರ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಕಳೆದ ತಿಂಗಳಲ್ಲಿ ಸಿದ್ದರಾಮಯ್ಯನವರು ಟ್ವಿಟರ್ ಮೂಲಕ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ವಾಕ್ ಸಮರಕ್ಕೆ ಕಾರಣರಾಗಿದ್ದರು.
ಒಂದಷ್ಟುದಿನ ಅದು ಮೈತ್ರಿ ಪಕ್ಷಗಳ ನಡುವೆ ಬಿರುಕಿಗೆ ಕಾರಣವಾಯಿತು. ಎಲ್ಲವೂ ತಣ್ಣಗಾಯಿತು ಎಂಬ ಸಂದರ್ಭದಲ್ಲೇ ಸಂಪುಟ ವಿಸ್ತರಣೆಯಾಗಿದೆ. ಕಾಂಗ್ರೆಸ್ನ ಶಾಸಕರು ಸಚಿವ ಸ್ಥಾನ ಸಿಗದಿದ್ದಕ್ಕಾಗಿ ಬಹಿರಂಗ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ದೇವೇಗೌಡರು ಸರ್ಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್ ನಾಯಕರಿಗೆ ಸೇರಿದ ವಿಷಯ. ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು. ನಾನು ಈವರೆಗೂ ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಸರ್ಕಾರ ರಚನೆ ವೇಳೆ ಮೂರನೇ ಒಂದು ಭಾಗ ಅಧಿಕಾರ ಹಂಚಿಕೆಯ ಸೂತ್ರ ವಿಧಿಸಲಾಗಿತ್ತು.
ಅದನ್ನು ಕಾಂಗ್ರೆಸ್ ಪಾಲಿಸುತ್ತಿಲ್ಲ. ನಮ್ಮ ಪಕ್ಷದ ಒಂದು ಸಚಿವ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದೇವೆ. ನೋವನ್ನು ನುಂಗಿಕೊಂಡಿದ್ದೇವೆ ಎಂದು ದೇವೇಗೌಡರು ಹೇಳಿಕೆ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಶಾಸಕರಾದ ಎಸ್.ಟಿ.ಸೋಮಶೇಖರ್, ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ನ 77 ಮಂದಿ ಶಾಸಕರು ವಿಷ ಕುಡಿಯುವ ಪರಿಸ್ಥಿತಿಗೆ ತಲುಪಿದ್ದಾರೆ. ಅಮೃತ ಕುಡಿಯುತ್ತಿರುವ ಜೆಡಿಎಸ್ನವರು ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಕಾಂಗ್ರೆಸ್ ಶಾಸಕ ಮಣಿರತ್ನ ಮಾತನಾಡಿ, ಜೊತೆಯಲ್ಲಿ ಇರುವುದಾದರೆ ಇರಿ. ಇಲ್ಲವಾದರೆ ಮಧ್ಯಂತರ ಚುನಾವಣೆಗೆ ನಡೆಯಿರಿ ನಾವು ಸಿದ್ಧರಿದ್ದೇವೆ. ಬಿರುಕಿನ ಮಾತನ್ನು ಆಡಿಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಾಳೆಯದ ನಾಯಕರು ಸರ್ಕಾರ ಹೋಗುವುದಾದರೆ ಹೋಗಲಿ, ಸರ್ಕಾರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಉಳಿಸಿಕೊಂಡರೆ ಅವರಿಗೆ ಅನುಕೂಲ ಇಲ್ಲವಾದರೆ ನಾವು ಏನು ಮಾಡಲು ಆಗುವುದಿಲ್ಲ ಎಂದು ಹೇಳಲಾರಂಭಿಸಿದ್ದಾರೆ.