ಶಾಸಕರ ರಾಜೀನಾಮೆಗೆ ತಾತ್ಕಾಲಿಕ ಬ್ರೇಕ್

ಬೆಂಗಳೂರು,ಜೂ.21-ಸಮ್ಮಿಶ್ರ ಸರ್ಕಾರದಲ್ಲಿ ಕುದಿಯುತ್ತಿರುವ ಅಸಮಾಧಾನದಿಂದಾಗಿ ಸುಮಾರು 10-12 ಮಂದಿ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದ ಬೆಳವಣಿಗೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಇದೇ ತಿಂಗಳ 25ಕ್ಕೆ ಮರು ಮುಹೂರ್ತ ನಿಗದಿಯಾಗಿದೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವಜೆಡಿಎಸ್ -ಕಾಂಗ್ರೆಸ್ ನಾಯಕರೇ ತಮ್ಮ ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ, ವಾತಾವರಣವನ್ನು ಕದಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‍ನ ಸುಮಾರು 11 ಮಂದಿ ಶಾಸಕರು ಮೊದಲ ಹಂತದಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದವು. ಅದನ್ನು ಸರಿಪಡಿಸಲು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ಪರಮೇಶ್ವರ್, ದಿನೇಶ್‍ಗುಂಡೂರಾವ್ ಯಾರೂ ಗಂಭೀರ ಪ್ರಯತ್ನ ನಡೆಸಲಿಲ್ಲ.

ಯಾವ ಅಸಮಾಧಾನವೂ ಇಲ್ಲ.ಯಾರೂ ರಾಜೀನಾಮೆ ಕೊಡುವುದಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಹೇಳುತ್ತಾ ಮೌನವಾಗಿದ್ದಾರೆ. ಕಾಂಗ್ರೆಸ್ ಪಾಳೆಯದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ದೇವೆಗೌಡರು ಮೊದಲ ಬಾರಿಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕೆಲವು ಶಾಸಕರು ರಾಜೀನಾಮೆ ನೀಡೇಬಿಡುತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಈ ಮೊದಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರನ್ನು ನೇಮಿಸದೆ ಜಯರಾಂ ಅವರನ್ನು ನೇಮಿಸಲಾಗಿತ್ತು.ನಿನ್ನೆ ಬೆಳವಣಿಗೆಗಳು ತೀವ್ರಗೊಂಡ ಬೆನ್ನಲ್ಲೆ ಏಕಾಏಕಿ ಜಯರಾಂ ಅವರ ರಾಜೀನಾಮೆ ಕೊಡಿಸಿ ಸುಧಾಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇತರ ಶಾಸಕರ ಜೊತೆ ಮಾತುಕತೆ ಮುಂದುವರೆದಿದೆ.ಹೀಗಾಗಿ ನಿನ್ನೆಯೇ ನಡೆಯಬೇಕಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ತಾತ್ಕಾಲಿಕವಾಗಿ ತಣ್ಣಗಾಗಿವೆ.

ಉನ್ನತ ಮೂಲಗಳ ಪ್ರಕಾರ ಶಾಸಕರು ರಾಜೀನಾಮೆ ಕೊಟ್ಟರೆ ಕಾನೂನಾತ್ಮಕವಾಗಿ ಅವರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಕೆಲವು ಸಮಾಲೋಚನೆಗಳು ನಡೆಯುತ್ತಿವೆ. ಅದರ ಸ್ಪಷ್ಟತೆ ಬಂದ ಬಳಿಕ ಶಾಸಕರು ಸಾಲುಸಾಲಾಗಿ ರಾಜೀನಾಮೆ ಕೊಡುತ್ತಾರೆ.

ಮೊದಲ ಹಂತದಲ್ಲಿ 11 ಮಂದಿ , 2ನೇ ಹಂತದಲ್ಲಿ 8 ಮಂದಿ ರಾಜೀನಾಮೆ ಕೊಡಲು ಸಿದ್ಧರಿದ್ದಾರೆ. ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ಕೂಡ ತನ್ನ ನಿಲುವನ್ನು ಬದಲಿಸಿದ್ದು, ಕಾಂಗ್ರೆಸ್ ಶಾಸಕರೇ ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಬಿಜೆಪಿ ಸರ್ಕಾರ ರಚಿಸಲಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಬಿಜೆಪಿ ಪಾಳೆಯ ಸದ್ದಿಲ್ಲದೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಮೂಲಗಳ ಪ್ರಕಾರ ಮುಂದಿನ ವಾರದೊಳಗೆ ಒಂದಷ್ಟು ಮಹತ್ವದ ಬೆಳವಣಿಗೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಬಿಜೆಪಿ ನಾಯಕರು ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದು, ಈ ಹಿಂದಿನಂತೆ ದುಡುಕಿ ವೈಫಲ್ಯ ಅನುಭವಿಸುವುದಕ್ಕಿಂತ ಎಲ್ಲ ವ್ಯವಸ್ಥೆಗಳನ್ನು ಪಕ್ಕ ಮಾಡಿಕೊಂಡು ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದ್ದಾರೆ.

ವಿಧಾನಸಭೆ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ಒಂದೆಡೆ ಅವಿಶ್ವಾಸ ನಿರ್ಣಯ ಮಂಡಿಸುವುದು, ಮತ್ತೊಂದೆಡೆ ಶಾಸಕರ ರಾಜೀನಾಮೆ ಕೊಡಿಸುವ ಕೆಲಸವನ್ನು ಏಕಕಾಲಕ್ಕೆ ಬಿಜೆಪಿ ಕೈಗೆತ್ತಿಕೊಳ್ಳಲಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ