ಬೆಂಗಳೂರು, ಜೂ.19- ನಿನ್ನೆಯಷ್ಟೇ ಕಾಂಗ್ರೆಸ್ನಿಂದ ಅಮಾನತುಗೊಂಡಿದ್ದ ಮಾಜಿ ಸಚಿವ ಹಾಗೂ ಶಿವಾಜಿನಗರ ಶಾಸಕ ರೋಷನ್ಬೇಗ್ಗೆ ಮತ್ತೊಂದು ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಇಡೀ ರಾಷ್ಟ್ರದ ಗಮನ ಸೆಳೆದಿರುವ ಐಎಂಎ ವಂಚನೆ ಪ್ರಕರಣದಲ್ಲಿ ಮಹಮ್ಮದ್ ಮನ್ಸೂರ್ ಆಲಿಖಾನ್ ಜತೆ ರೋಷನ್ಬೇಗ್ ಹೆಸರು ಕೇಳಿಬಂದಿದ್ದರಿಂದ ವಿಶೇಷ ತನಿಖಾದಳ (ಎಸ್ಐಟಿ) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಯಾವುದೇ ಸಂದರ್ಭದಲ್ಲಿ ಐಎಂಎ ಪ್ರಕರಣ ಕುರಿತಂತೆ ರೋಷನ್ಬೇಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಒಂದು ವೇಳೆ ರೋಷನ್ಬೇಗ್ ಅವರಿಂದ ಹೆಚ್ಚಿನ ಮಾಹಿತಿ ಪಡೆಯುವ ಅಗತ್ಯವಿದೆ ಎಂಬುದು ಎಸ್ಐಟಿಗೆ ಮನವರಿಕೆಯಾದರೆ ಅವರನ್ನು ವಶಕ್ಕೆ ಪಡೆದರೂ ಅಚ್ಚರಿಯಿಲ್ಲ.
ನನ್ನ ವ್ಯವಹಾರ ನಷ್ಟವಾಗಲು ಶಾಸಕರೊಬ್ಬರು ಕಾರಣ ಎಂದು ವಿದೇಶಕ್ಕೆ ಪರಾರಿಯಾಗುವ ಮುನ್ನ ಮಹಮ್ಮದ್ ಮನ್ಸೂರ್ ಅಲಿಖಾನ್ ವಿಡಿಯೋದಲ್ಲಿ ಹೇಳಿಕೆ ಕೊಟ್ಟಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಎರಡು ದಿನಗಳ ಹಿಂದೆಯಷ್ಟೇ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೀಡಿದ್ದ ಹೇಳಿಕೆಯೊಂದು ರೋಷನ್ಬೇಗ್ಗೆ ಮತ್ತಷ್ಟು ಕಾನೂನಿನ ಸಂಕಷ್ಟ ತಂದೊಡ್ಡಿತ್ತು.
ವಿವಿಧ ಬ್ಯಾಂಕ್ಗಳಲ್ಲಿ ಆಲಿಖಾನ್ 600 ಕೋಟಿ ಸಾಲ ಪಡೆಯಲು ನಿರಪಕ್ಷೇಣ ಪತ್ರ (ಎನ್ಒಸಿ) ನೀಡುವಂತೆ ರೋಷನ್ಬೇಗ್ ನನ್ನ ಬಳಿ ಕರೆತಂದಿದ್ದರೆಂದು ಖುದ್ದು ದೇಶಪಾಂಡೆಯೇ ಹೇಳಿಕೆ ನೀಡಿದ್ದರು.
ಕೆಲವು ವ್ಯವಹಾರಗಳಲ್ಲಿ ಆಲಿಖಾನ್ ಜತೆ ರೋಷನ್ಬೇಗ್ ನೇರವಾಗಿ ಶಾಮೀಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ಕಳೆದ ಹಲವು ವರ್ಷಗಳಿಂದ ಅನ್ಯೋನ್ಯವಾಗಿದ್ದುಕೊಂಡೇ ಕೋಟಿಗಳ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.
ಐಎಂಎ ಕಂಪೆನಿ ವಿರುದ್ಧ ದೂರು ನೀಡಿರುವ ಬಹುತೇಕರು ರೋಷನ್ಬೇಗ್ ವಿರುದ್ಧವೂ ತನಿಖೆಯಾಗಬೇಕೆಂದು ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಕುಮ್ಮಕ್ಕಿನಿಂದಲೇ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ. ರೋಷನ್ಬೇಗ್ ವಿಚಾರಣೆ ಮಾಡಿದರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ನೊಂದವರು ಗೌಪ್ಯವಾಗಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹಲವು ವ್ಯವಹಾರಗಳಲ್ಲಿ ಒಪ್ಪಂದ: ಇನ್ನು ರೋಷನ್ಬೇಗ್ ಮತ್ತು ಆಲಿಖಾನ್ ಹಲವಾರು ವ್ಯವಹಾರಗಳಲ್ಲಿ ಒಪ್ಪಂದ ಮಾಡಿಕೊಂಡಿರುವುದು ಬಹಿರಂಗವಾಗಿದೆ.
ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ಹಲವು ವ್ಯವಹಾರಗಳಲ್ಲಿ ಬೇಗ್ ಮತ್ತು ಆಲಿಖಾನ್ ಒಪ್ಪಂದ ಮಾಡಿಕೊಂಡೇ ಭಾರೀ ಪ್ರಮಾಣದ ವಹಿವಾಟು ನಡೆಸಿದ್ದಾರೆ.
ರೋಷನ್ಬೇಗ್ ಕೆಲವು ಪ್ರಭಾವಿ ರಾಜಕಾರಣಿಗಳನ್ನು ಪರಿಚಯ ಮಾಡಿಕೊಟ್ಟ ಮೇಲೆ ಆಲಿಖಾನ್ ವ್ಯವಹಾರ ಇದ್ದಕ್ಕಿದ್ದಂತೆ ಎತ್ತರಕ್ಕೆ ಬೆಳೆಯಿತು.ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಘಟಾನುಘಟಿ ನಾಯಕರ ಜತೆ ತೆಗೆಸಿಕೊಂಡ ಪೋಟೋಗಳಿಂದಲೇ ಪ್ರಭಾವಿತರಾಗಿ ಅನೇಕರು ಆಸೆಗೆ ಬಿದ್ದು ಹಣ ಹೂಡಿಕೆ ಮಾಡಿದ್ದರು.
ಇದೀಗ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿರುವ ಎಸ್ಐಟಿ ಶೀಘ್ರದಲ್ಲೇ ರೋಷನ್ಬೇಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದೆ.
ಈ ಹಿಂದೆ ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಬಳ್ಳಾರಿ ಗಣಿಧಣಿ ಜನಾರ್ದನರೆಡ್ಡಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಬಳಿಕ ಹೆಚ್ಚಿನ ವಿಚಾರಣೆ ನೆಪದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ರೋಷನ್ಬೇಗ್ಗೂ ಕೂಡ ಇದೇ ಭೀತಿ ಕಾಡುತ್ತಿದೆ.