ಖ್ಯಾತ ಲೇಖಕ, ಕಲಾವಿದ, ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ ವಿದಿವಶ

ಬೆಂಗಳೂರು, ಜೂ.19- ಖ್ಯಾತ ಲೇಖಕ, ಕಲಾವಿದ, ರಂಗಕರ್ಮಿ ಮತ್ತು ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ (82) ಇನ್ನಿಲ್ಲ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಡಾ.ಚೌಟ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಂಗ ನಿರಂತರ ಕಾರ್ಯಾಧ್ಯಕ್ಷರು ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್‍ನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಡಾ.ಡಿ.ಕೆ.ಚೌಟ ಅವರು ಬಹುಮುಖ ಪ್ರತಿಭೆಯ ಹಿರಿಯ ಚೇತನ.

ಕೇರಳದ ಮಂಜೇಶ್ವರ ಬಳಿ ಮೀಯಪ್ಪಡ್ಡು ಎಂಬಲ್ಲಿ ತುಳು ಮಾತನಾಡುವ ಬಂಟ ಕುಟುಂಬದಲ್ಲಿ ಚೌಟ ಜನಿಸಿದರು. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಚೌಟ ಮುಂಬೈ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಆಫ್ರಿಕಾ ರಾಷ್ಟ್ರಗಳಾದ ಗಾನಾ ಮತ್ತು ನೈಜೀರಿಯಾದಲ್ಲಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅವರು ಬಳಿಕ ಕೆಲಕಾಲ ಲಂಡನ್‍ನಲ್ಲಿದ್ದರು.

ನಂತರ ಬೆಂಗಳೂರಿಗೆ ಹಿಂದಿರುಗಿದ ಅವರು ತಮ್ಮದೇ ಆದ ಉದ್ಯಮ ಆರಂಭಿಸಿದರು. ರಫ್ತು ವಹಿವಾಟು, ಕಂಟ್ರಿ ಕ್ಲಬ್, ಇತರ ಉದ್ಯಮಗಳಲ್ಲಿ ತೊಡಗಿದ್ದ ಚೌಟ ಪವರ್‍ಗೇರ್ ಲಿಮಿಟೆಡ್, ಪಿಸಿ ಎಕ್ಸ್‍ಪಟ್ರ್ಸ್ ಮತ್ತು ಸನ್‍ವ್ಯಾಲ್ಯೂ ಕ್ಲಬ್‍ನ ಒಡೆಯರಾಗಿದ್ದರು. ರಫ್ತು ವಹಿವಾಟಿನಲ್ಲಿ ಗಣನೀಯ ಸೇವೆ ಸಲ್ಲಿಸಿದ ಅವರಿಗೆ ಐದು ಬಾರಿ ರಫ್ತು ಉತ್ತೇಜನ ಮಂಡಳಿಯಿಂದ ಪ್ರಶಸ್ತಿಗಳು ಲಭಿಸಿದ್ದವು.

ಕಲಾರಾಧಕರೂ ಆಗಿದ್ದ ಅವರು ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದ್ದರು.ಭಂಟರ ಸಂಘದ ಅಧ್ಯಕ್ಷರೂ ಆಗಿದ್ದ ಅವರು ತಮ್ಮ ಅಧಿಕಾರಾವಧಿಯಲ್ಲಿ 1995ರಲ್ಲಿ ಬೆಂಗಳೂರಿನಲ್ಲಿ ವಿಶ್ವ ಬಂಟರ ಸಮಾವೇಶ ಯಶಸ್ವಿಯಾಗಿ ಆಯೋಜಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಡಾ.ಚೌಟ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿತ್ತು.

ಸಾಹಿತ್ಯ ಕ್ಷೇತ್ರದಲ್ಲೂ ಇವರು ಕೃಷಿ ಮಾಡಿದ್ದಾರೆ. ಆನಂದ ಕೃಷ್ಣ ಎಂಬ ಕಾವ್ಯನಾಮದಿಂದ ಅನೇಕ ನಾಟಕಗಳು ಮತ್ತು ಕೃತಿಗಳನ್ನು ರಚಿಸಿದ್ದಾರೆ.

ಚಿತ್ರಕಲಾಕಾರರಾಗಿಯೂ ಗುರುತಿಸಿಕೊಂಡಿದ್ದ ಅವರು ಸಾಹಿತ್ಯದ ಜತೆಜತೆಗೆ ನಾಟಕಗಳಲ್ಲೂ ಸಕ್ರಿಯರಾಗಿದ್ದರು. ಇವರ ಇಬ್ಬರು ಪುತ್ರರಾದ ಸಂದೀಪ್ ಚೌಟ ಮತ್ತು ಪ್ರಜ್ನಾ ಚೌಟ ಸಹ ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಿದ್ದಾರೆ.

.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ