ಬೆಂಗಳೂರು, ಜೂ.19- ನಾಡಿನ ಜಲ, ನೆಲ, ಭಾಷೆ ಸೇರಿದಂತೆ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಹಾಗೂ ರಾಜ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಮಾಡುವ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಸಂಸದರ ಜತೆ ಸಭೆ ನಡೆಸಲಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರ ನಿವಾಸದಲ್ಲಿ ಮುಂದಿನ ವಾರ ಯಡಿಯೂರಪ್ಪ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಹಾಗೂ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಮುಂದಿನ ತಿಂಗಳು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಖಾತೆ ಹೊಂದಿರುವ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಕರ್ನಾಟಕ ವಿಧಾನಸಭೆಯಿಂದಲೇ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್‍ನಲ್ಲಿ ರಾಜ್ಯಕ್ಕೆ ಕೆಲವು ವಿಶೇಷ ಯೋಜನೆಗಳನ್ನು ಪ್ರಕಟಿಸುವಂತೆ ಬಿಎಸ್‍ವೈ ಮನವಿ ಮಾಡಲಿದ್ದಾರೆ.
ಪ್ರಮುಖವಾಗಿ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಈಗಾಗಲೇ ಘೋಷಣೆ ಮಾಡಿರುವಂತೆ ಸಬರ್‍ಬನ್ ರೈಲ್ವೆ ಯೋಜನೆಗೆ ವಿಶೇಷ ಆರ್ಥಿಕ ನೆರವು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು, ಕರ್ನಾಟಕಕ್ಕೆ ಏಮ್ಸ್ ಕೇಂದ್ರವನ್ನು ಜಾರಿಮಾಡುವುದು, ರಾಜ್ಯಕ್ಕೆ ಮತ್ತೊಂದು ಐಐಟಿ, ಹೊಸ ರೈಲುಗಳ ಘೋಷಣೆ ಮಾಡುವುದು ಸೇರಿದಂತೆ ರಾಜ್ಯಕ್ಕೆ ವಿಶೇಷ ಒತ್ತು ನೀಡುವಂತೆ ಸಚಿವರು ಮತ್ತು ಸಂಸದರ ಮೂಲಕ ನಿರ್ಮಲಾ ಸೀತಾರಾಮನ್‍ಗೆ ಒತ್ತಾಯ ಮಾಡಲಿದ್ದಾರೆ.
ಈ ಬಾರಿ ಕರ್ನಾಟಕದಿಂದ 25 ಸಂಸದರನ್ನು ರಾಜ್ಯದ ಜನತೆ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಇಷ್ಟು ದೊಡ್ಡ ಮಟ್ಟದ ಫಲಿತಾಂಶ ಬಂದಿದೆ. ಹೀಗಾಗಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೆ ಬಜೆಟ್‍ನಲ್ಲಿ ರಾಜ್ಯಕ್ಕೆ ವಿಶೇಷ ಯೋಜನೆಗಳನ್ನು ಪ್ರಕಟಿಸುವಂತೆ ಕೋರಲಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಸಚಿವರು ಮತ್ತು ಸಂಸದರಿಗೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ವಿವರಗಳ ಪಟ್ಟಿಯನ್ನು ಸಿದ್ಧಪಡಿಸುವಂತೆಯೂ ಬಿಎಸ್‍ವೈ ಸೂಚಿಸಿದ್ದಾರೆ.ಅಲ್ಲದೆ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಸಹ ಭೇಟಿ ಮಾಡಿ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಮನವಿ ಪತ್ರವೊಂದನ್ನು ಸಲ್ಲಿಸಲಿದ್ದಾರೆ.
ಸಂಸತ್‍ನಲ್ಲಿ ಹೋರಾಟ ನಡೆಸಬೇಕು: ಇನ್ನು ರಾಜ್ಯದ ಸಂಸದರಿಗೆ ಯಡಿಯೂರಪ್ಪ ಈ ಬಾರಿ ಸಂಸತ್ತಿನ ಉಭಯ ಸದನಗಳಲ್ಲಿ ರಾಜ್ಯದ ಹಿತ ಕಾಪಾಡುವ ಬಗ್ಗೆ ಹಿತೋಪದೇಶ ಮಾಡಲಿದ್ದಾರೆ.
ಕಾವೇರಿ, ಕೃಷ್ಣಾ ನದಿನೀರು ಹಂಚಿಕೆ, ಮೇಕೆದಾಟು ಯೋಜನೆ ಅನುಷ್ಠಾನ, ಉತ್ತರ ಕರ್ನಾಟಕ ಭಾಗಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿನೀರು ಯೋಜನೆಯನ್ನು ಇತ್ಯರ್ಥಗೊಳಿಸುವುದು ಸೇರಿದಂತೆ ಕರ್ನಾಟಕದ ಯಾವುದೇ ವಿಷಯಗಳ ಬಗ್ಗೆಯೂ ಸಂಸತ್‍ನಲ್ಲಿ ಎದೆಗಾರಿಕೆಯಿಂದ ಮಾತನಾಡುವಂತೆ ಸಲಹೆ ಮಾಡಲಿದ್ದಾರೆ.
ರಾಜ್ಯದ ವಿಷಯದಲ್ಲಿ ನಾವು ತಮಿಳುನಾಡು ಮತ್ತು ಆಂಧ್ರ ಪ್ರದೇಶದವರನ್ನು ನೋಡಿ ಕಲಿಯಬೇಕು. ಅಲ್ಲಿನ ಹಿತಾಸಕ್ತಿ ಬಂದಾಗ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಇದೇ ರೀತಿ ನಾವು ಕೂಡ ಸಂಸತ್ತಿನ ಎರಡೂ ಸದನಗಳಲ್ಲಿ ರಾಜ್ಯದ ಯಾವುದೇ ವಿಷಯ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡುವಂತೆ ಸೂಚನೆ ಕೊಡುವರು.
ಈವರೆಗೂ ಕಾಂಗ್ರೆಸ್-ಜೆಡಿಎಸ್‍ನಿಂದ ಅಷ್ಟೋ ಇಷ್ಟೋ ಸಂಸದರು ಗೆದ್ದು ಬರುತ್ತಿದ್ದರು.ಈ ಬಾರಿ ಎರಡೂ ಪಕ್ಷಗಳಿಂದ ಕೇವಲ ಇಬ್ಬರು ಮಾತ್ರ ಗೆದ್ದಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ನಮ್ಮ ಹೋರಾಟದಲ್ಲಿ ಕೈ ಜೋಡಿಸುವರು. ಹೀಗಾಗಿ 26 ಸಂಸದರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಕರ್ನಾಟಕದ ವಿಷಯ ಬಂದಾಗ ನಿಮ್ಮ ಧ್ವನಿ ಪ್ರತಿಧ್ವನಿಸಬೇಕೆಂದು ಕಿವಿಮಾತು ಹೇಳುವರು.