ಬೆಂಗಳೂರು, ಜೂ.18-ಮಾಜಿ ಸಚಿವ ರೋಷನ್‍ಬೇಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ವರದಿ ನೀಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಷನ್‍ಬೇಗ್ ತಮ್ಮ ಬಗ್ಗೆ ಈ ಹಿಂದೆಯೂ ಗುರುತರವಾದ ಆರೋಪಗಳನ್ನು ಮಾಡಿದ್ದರು.ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ರಾಜ್ಯ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂದರೆ ಅವರು ರಾಹುಲ್‍ಗಾಂಧಿಯವರ ಪ್ರತಿನಿಧಿಯಿದ್ದಂತೆ. ಆದರೆ ರೋಷನ್ ಬೇಗ ಪಕ್ಷದ ಶಿಸ್ತನ್ನು ಸಂಪೂರ್ಣವಾಗಿ ಕಡೆಗಣಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ನಾನು ವರದಿ ನೀಡಿದ್ದೇನೆ. ಐಎಂಎ ವಂಚನೆ ಪ್ರಕರಣದಲ್ಲಿ ಆಡಿಯೋದಲ್ಲಿರುವ ಧ್ವನಿ, ರೋಷನ್‍ಬೇಗ್ ಅವರ ಹೆಸರು ಪ್ರಸ್ತಾಪ ಎಲ್ಲವನ್ನೂ ಸೇರಿದಂತೆ ಕಾಂಗ್ರೆಸ್‍ಗೆ ವರದಿ ನೀಡುವುದಾಗಿ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ವೇಳೆ ಬಹಳಷ್ಟು ಮಂದಿಗೆ ಅವಕಾಶ ಸಿಗಲಿದೆ. ಪಕ್ಷಕ್ಕೆ ಯಾರು ನಿಷ್ಠಾವಂತರಾಗಿರುತ್ತಾರೋ ಅವರಿಗೆ ಸಚಿವ ಸ್ಥಾನ ಸಿಕ್ಕೇಸಿಗುತ್ತದೆ ಎಂದು ಒತ್ತಿ ಹೇಳಿದರು.
ಕಾಂಗ್ರೆಸ್‍ನ ಯಾವ ಶಾಸಕರೂ ಅಸಮಾಧಾನಗೊಂಡಿಲ್ಲ, ಯಾರೂ ರಾಜೀನಾಮೆ ನೀಡುತ್ತಿಲ್ಲ. ಎಲ್ಲವೂ ಕೇವಲ ವದಂತಿ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನಿರಾಂತಕವಾಗಿ ಅವಧಿ ಪೂರ್ಣಗೊಳಿಸಲಿದೆ ಎಂದು ಹೇಳಿದರು.
ಜಿಂದಾಲ್‍ಗೆ ಭೂಮಿ ನೀಡಿಕೆ ವಿಷಯವಾಗಿ ನಮ್ಮ ಪಕ್ಷದ ಶಾಸಕರಾದ ಆನಂದ್‍ಸಿಂಗ್ ಮತ್ತು ಅನಿಲ್‍ಲಾಡ್ ಎತ್ತಿರುವ ಪ್ರಶ್ನೆಗಳನ್ನು ಗಮನಿಸಿದ್ದೇನೆ. ಹಿಂದೆ ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದಾಗ ಜಿಂದಾಲ್‍ಗೆ ಭೂಮಿ ನೀಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆ ವೇಳೆ ಆನಂದ್‍ಸಿಂಗ್ ಬಿಜೆಪಿಯಲ್ಲೇ ಇದ್ದರು.ಈಗ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ತಕರಾರುಗಳಿದ್ದರೆ ಅದನ್ನು ಸಚಿವ ಸಂಪುಟದ ಉಪಸಮಿತಿ ಮುಂದೆ ಮಂಡಿಸಲಿ ಎಂದು ದಿನೇಶ್‍ಗುಂಡೂರಾವ್ ಸಲಹೆ ನೀಡಿದರು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರಿಗೆ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಟೋಪಿ ಹಾಕಿದ್ದಾರೆ ಎಂಬ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ನಾಯಕರು ದೆಹಲಿಗೆ ಭೇಟಿ ನೀಡಿರುವುದನ್ನು ವಿಶೇಷವಾಗಿ ಪರಿಗಣಿಸಬೇಕಿಲ್ಲ. ಕೆಲಸ ಇದ್ದಾಗ ದೆಹಲಿಗೆ ಹೋಗುವುದು ಸಾಮಾನ್ಯ. ನಾನೂ ಕೂಡ ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು.
ಐಎಂಎ ಹಗರಣದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಅನ್ಯಾಯವಾಗಿದೆ. ಅವರಿಗೆ ನ್ಯಾಯ ಸಿಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿರುವುದಾಗಿ ಹೇಳಿದರು.