ಮೈಸೂರು, ಮಾ.26- ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಈ ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಸರ್ಕಾರ ನಡೆಸಿರುವ ಜೆಡಿಎಸ್ ಈ ಬಾರಿಯೂ ಚುನಾವಣೆಯಲ್ಲಿ ಕೇಸರಿ ಪಕ್ಷದ ಜತೆ ಸಖ್ಯ ಬೆಳೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ, ಜೆಡಿಎಸ್ ಅವಕಾಶವಾದಿ, ಬಿಜೆಪಿ ಕೋಮುವಾದಿ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಅಂದು ನನ್ನ ಶವದ ಮೇಲೆ ಸರ್ಕಾರ ರಚನೆ ಮಾಡಿ ಎಂದು ಹೇಳಿದ್ದರು. ಇದೀಗ ಅವರು ಏನು ಮಾಡುತ್ತಿದ್ದಾರೆಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
20 ತಿಂಗಳು ಕುಮಾರಸ್ವಾಮಿ ಅಧಿಕಾರ ನಡೆಸಿದ ನಂತರ ನನ್ನ ಮಗ ಪಕ್ಷ ಉಳಿಸುವ ಕೆಲಸ ಮಾಡಿದ್ದಾರೆ ಎಂಬ ಹೇಳಿಕೆಯನ್ನು ದೇವೇಗೌಡರು ನೀಡಿದ್ದರು. ಇದೀಗ ಬಿಜೆಪಿ ಜತೆ ಕೈ ಜೋಡಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಜೆಡಿಎಸ್ ಅವಕಾಶವಾದಿ ಪಕ್ಷವಲ್ಲವೆ ಎಂದು ಕುಟುಕಿದರು.
ಸಮಾವೇಶ ಯಶಸ್ವಿಗೆ ಸಿಎಂ ಅಭಿನಂದನೆ: ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಯಶಸ್ವಿಯಾಗಿದ್ದು, ಸಮಾವೇಶಕ್ಕೆ ಆಗಮಿಸಿದ್ದವರೆಲ್ಲರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.
ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಜನಾಶೀರ್ವಾದ ಯಾತ್ರೆ ಮೈಸೂರಿನಲ್ಲಿ ಯಶಸ್ವಿ ಕಂಡಿದೆ ಎಂದು ಹೇಳಿದರು.
ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಹಂತದಲ್ಲಿ ಸಭೆ ನಡೆಸಿ ಶಿಫಾರಸು ಮಾಡಲಾಗುತ್ತದೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಎಂದರು.
ರಾಹುಲ್ಗಾಂಧಿ ಅವರು ಮಲೆನಾಡು ಭಾಗದಲ್ಲಿ ಏಪ್ರಿಲ್ ಮೊದಲ ವಾರ ಮೂರನೆ ಹಂತದ ಜನಾಶೀರ್ವಾದ ಪ್ರವಾಸ ಕೈಗೊಳ್ಳಲಿದ್ದಾರೆ. ಏ.6ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ರಾಹುಲ್ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.