ಬೆಂಗಳೂರು, ಜೂ.17- ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯರು ಕರೆ ನೀಡಿರುವ ಮುಷ್ಕರದ ಬಿಸಿ ರಾಜ್ಯಕ್ಕೂ ತಟ್ಟಿದೆ.
ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ನಿಮ್ಹಾನ್ಸ್, ಇಎಸ್ಐ ಆಸ್ಪತ್ರೆಗಳಲ್ಲಿನ ಹೊರ ರೋಗಿಗಳ ಚಿಕಿತ್ಸಾ ವಿಭಾಗ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಆರೋಗ್ಯ ಸೇವೆ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.
ರಾಜ್ಯಸರ್ಕಾರದ ಕಠಿಣ ಸೂಚನೆಯನ್ನೂ ಧಿಕ್ಕರಿಸಿ ಸರ್ಕಾರಿ ಆಸ್ಪತ್ರೆಗಳ ವೈದ್ಯರೂ ಕೂಡ ಮುಷ್ಕರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿರಲಿಲ್ಲ. ಆದರೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಿದರು. ಇನ್ನೂ ಕೆಲವು ವೈದ್ಯರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ತೆರಳಿದ್ದರಿಂದ ವೈದ್ಯರ ಕೊರತೆ ಕಾಡುತ್ತಿತ್ತು.
ತುರ್ತು ಚಿಕಿತ್ಸೆಗಾಗಿ ಬಂದ ಜನ ವೈದ್ಯರು ಅಲಭ್ಯತೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದರು. ಏಕಕಾಲಕ್ಕೆ ಸಾವಿರಾರು ಜನ ಆಗಮಿಸಿದ್ದರಿಂದ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದವು.
ಬೆಂಗಳೂರಿನ ನಿಮ್ಹಾನ್ಸ್, ಬೆಂಗಳೂರಿನ ರಾಜಾಜಿನಗರ, ಕಲಬುರಗಿಯ ಇಎಸ್ಐ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಅಲ್ಲಿನ ವೈದ್ಯರು ಹೊರರೋಗಿಗಳ ಚಿಕಿತ್ಸಾ ವಿಭಾಗವನ್ನು ಸ್ಥಗಿತಗೊಳಿಸಿದ್ದರು.
ರಾಜಧಾನಿ ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ತುಮಕೂರು, ಮಂಡ್ಯ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯರು ದಿಢೀರ್ ಮುಷ್ಕರ ನಡೆಸಿದರು. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಯಿತು.
ಖಾಸಗಿ ಆಸ್ಪತ್ರೆಗಳಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಹೊರ ರೋಗಿಗಳ ತಪಾಸಣೆ, ಚಿಕಿತ್ಸಾ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ನಾಮಫಲಕಗಳನ್ನು ಹಾಕಲಾಗಿತ್ತು. ಅನಾರೋಗ್ಯದಿಂದ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಈ ಬೋರ್ಡ್ ನೋಡಿ ಆಘಾತವಾಗಿದ್ದು, ಬೇರೆ ಆಸ್ಪತ್ರೆಗಳತ್ತ ಮುಖ ಮಾಡಿದರೂ ಅಲ್ಲೂ ಚಿಕಿತ್ಸೆ ಸಿಗದೆ ಕೊನೆಗೆ ಸರ್ಕಾರಿ ಆಸ್ಪತ್ರೆಗಳತ್ತ ಹೋದರು.
ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು ಸರ್ಕಾರ ಪೂರ್ವ ತಯಾರಿ ಮಾಡಿಕೊಂಡಿತ್ತು. ವೈದ್ಯರೂ ಸೇರಿದಂತೆ ಆಸ್ಪತ್ರೆಯ ಯಾವ ಸಿಬ್ಬಂದಿಯೂ ರಜೆ ಹಾಕದಂತೆ ಸುತ್ತೋಲೆ ಹೊರಡಿಸಿತ್ತು.
ಜಿಲ್ಲಾಡಳಿತಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಿ ತುರ್ತು ಚಿಕಿತ್ಸೆ ಹಾಗೂ ಐಸಿಯು ಘಟಕಗಳನ್ನು ತೆರೆಯಲಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಆದರೆ, ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆಗಿದ್ದರಿಂದ ಬೆಳಗ್ಗೆ ಚಿಕಿತ್ಸೆಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ನರಳಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಒಪಿಡಿ ತೆರೆದಿರಲಿಲ್ಲ. ವೈದ್ಯರು ಮುಷ್ಕರ ನಿರತರಾಗಿದ್ದರಿಂದ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ್ದ ರೋಗಿಗಳು ತೀವ್ರ ತೊಂದರೆ ಅನುಭವಿಸಬೇಕಾಯಿತು.
ಆಸ್ಪತ್ರೆ ನಿರ್ದೇಶಕರಾದ ಗಂಗಾಧರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಮುಷ್ಕರದಲ್ಲಿ ಸರ್ಕಾರದ ವೈದ್ಯರು ಪಾಲ್ಗೊಳ್ಳಬಾರದೆಂಬ ಸೂಚನೆ ನೀಡಲಾಗಿದೆ. ಆದರೂ ಕೆಲ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.ಒಪಿಡಿಯಲ್ಲಿ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
ಇತ್ತ ಬೆಂಗಳೂರಿನಲ್ಲಿರುವ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆದ ಪರಿಣಾಮ ರೋಗಿಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು.
ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿಯಲ್ಲಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಚಿಕಿತ್ಸೆಗಾಗಿ ಪರದಾಡುತ್ತಿದ್ದ ರೋಗಿಗಳು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ಅಗತ್ಯ ಸೇವೆಯಾಗಿದೆ. ಮುಷ್ಕರ ಮಾಡುವುದಾದರೆ ಮಾಹಿತಿ ನೀಡಬೇಕು.ಏಕಾಏಕಿ ಮುಷ್ಕರಕ್ಕೆ ಇಳಿಯಬಾರದೆಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ತಿಳಿಯದೆ ದಾವಣಗೆರೆ, ಚಿಕ್ಕೋಡಿ, ಯಾದಗಿರಿಯಲ್ಲಿನ ಪ್ರಮುಖ ಆಸ್ಪತ್ರೆಗಳಿಗೆ ಆಗಮಿಸಿದ ರೋಗಿಗಳ ಪರಿಸ್ಥಿತಿ ಕೂಡ ಶೋಚನೀಯವಾಗಿತ್ತು.
ಎಲ್ಲಾ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಲಾಗಿದೆ ಎಂಬ ಬೋರ್ಡ್ಗಳನ್ನು ನೇತು ಹಾಕಲಾಗಿತ್ತು. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ ನಿರತ ವೈದ್ಯರು ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ಮಾತನಾಡಿ ವೈದ್ಯರುಗಳಿಗೆ ರಕ್ಷಣೆ ಬೇಕಾಗಿದೆ. ಚಿಕಿತ್ಸೆ ವೈಫಲ್ಯದ ನೆಪದಲ್ಲಿ ಮಾರಣಾಂತಿಕವಾಗಿ ವೈದ್ಯರ ಮೇಲೆ ಹಲ್ಲೆ ನಡೆಯುವಂತಹ ಪ್ರಕರಣಗಳು ಹೆಚ್ಚುತ್ತಿವೆ. ನಾವು ಪ್ರಾಣ ಭೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಸರ್ಕಾರ ವೈದ್ಯರ ಮೇಲೆ ಹಲ್ಲೆಯಾಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವೈದ್ಯರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.