ಸಾಲಾ ಮನ್ನಾ ಯೋಜನೆ-ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿಹಾಕಿಕೊಂಡ ರೈತರು

ಬೆಂಗಳೂರು, ಜೂ.17-ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸುಮಾರು 3.30 ಲಕ್ಷ ರೈತರು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಕ್ಕಿ ಹಾಕಿಕೊಂಡಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 5 ಸಾವಿರ ಕೋಟಿ ಉಳಿತಾಯವಾಗಿದೆ.

ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆದಿರುವ ಬೆಳೆ ಸಾಲ ಮನ್ನಾವಾಗಬೇಕಾದರೆ ರೈತರು ಕಡ್ಡಾಯವಾಗಿ ಆಧಾರ್‍ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕೆಂಬ ಮಾನದಂಡವನ್ನು ಸರ್ಕಾರ ನಿಗದಿಪಡಿಸಿತ್ತು.

ಸಾಲಮನ್ನಾ ಯೋಜನೆ ಲಾಭ ಪಡೆಯಲು ರೈತರ ಸೋಗಿನಲ್ಲಿ ನಕಲಿ ಆಧಾರ್‍ಕಾರ್ಡ್, ಬ್ಯಾಂಕ್ ಖಾತೆ, ಪಡಿತರ ಚೀಟಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ಸಲ್ಲಿಸಿದ್ದರು.ಇವುಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎಂಬುದು ಸಾಬೀತಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 3.30 ಲಕ್ಷ ರೈತರು ಈ ರೀತಿ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ತೋರಿದ ಮುತುವರ್ಜಿಯಿಂದಾಗಿ ಬೊಕ್ಕಸಕ್ಕೆ ಬರೋಬ್ಬರಿ 5 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ತಿಳಿದುಬಂದಿದೆ.

1.90 ಲಕ್ಷ ರೈತರು ವಾಣಿಜ್ಯ ಬ್ಯಾಂಕುಗಳಿಂದ ಹಾಗೂ 1.40 ರೈತರು ಸಹಕಾರಿ ಬ್ಯಾಂಕ್‍ಗಳಿಂದ ಸಾಲ ಪಡೆದಿದ್ದೇವೆ ಎಂದು ಬ್ಯಾಂಕ್‍ಗಳಿಂದ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು.

ಈ ರೀತಿ ಹಿಂದೆಯೂ ಗೋಲ್‍ಮಾಲ್ ನಡೆದಿದ್ದರಿಂದ ಎಚ್ಚೆತ್ತುಕೊಂಡ ಸರ್ಕಾರ ರೈತರ ಸಾಲ ಮನ್ನಾ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು.

ಯಾವುದೇ ಕಾರಣಕ್ಕೂ ಇದು ಫಲಾನುಭವಿಗಳನ್ನು ಬಿಟ್ಟು ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರ ವಹಿಸಬೇಕೆಂದು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.

ಸಾಲ ಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮುದ್ಗಲ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದರು.

ರಾಜ್ಯದಲ್ಲಿ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‍ಗಳಿಂದ ಸುಮಾರು 27 ಲಕ್ಷ ರೈತರು 45 ಸಾವಿರ ಕೋಟಿ ಬೆಳೆ ಸಾಲ ಪಡೆದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂಕುಮಾರಸ್ವಾಮಿಯವರು ಸಾಲಮನ್ನಾ ಯೋಜನೆಯನ್ನು ಪ್ರಕಟಿಸಿದರು.

ರೈತರು ಬ್ಯಾಂಕ್‍ಗಳಿಗೆ ಸಲ್ಲಿಸಿದ್ದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕೆಲವರು ಬೇರೊಬ್ಬರ ಹೆಸರಿನಲ್ಲಿ ದಾಖಲೆಗಳನ್ನು ಸಲ್ಲಿಕೆ ಮಾಡಿರುವುದು ಕಂಡು ಬಂದಿದೆ. ಇದರಲ್ಲಿ ನಕಲಿ ಆಧಾರ್‍ಕಾರ್ಡ್, ಪಡಿತರ ಚೀಟಿ, ಸಂಬಂಧವೇ ಇಲ್ಲದ ಬ್ಯಾಂಕ್ ಖಾತೆಗಳು, ಬೇರೊಬ್ಬರ ಹೆಸರಿನಲ್ಲಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.

ಒಟ್ಟು 27 ಲಕ್ಷ ರೈತರ ಪೈಕಿ 22 ಲಕ್ಷ ರೈತರು ಆರೂವರೆ ಸಾವಿರ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಈವರೆಗೂ 9 ಲಕ್ಷ ಖಾತೆಗಳು ಸಾಲ ಮನ್ನಾ ಮಾಡಲು ಅರ್ಹ ಎಂದು ಪರಿಗಣಿಸಲಾಗಿದ್ದು, 12 ಲಕ್ಷ ಖಾತೆಗಳು ಪರಿಶೀಲನಾ ಹಂತದಲ್ಲಿವೆ.

ಯಾವ ಕಾರಣಕ್ಕೂ ನಕಲಿ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಬಾರದೆಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿರುವುದರಿಂದ ಫಲಾನುಭವಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲನೆ ಮಾಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ