ನವದೆಹಲಿ: ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಸತ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಜುಲೈ 26ರವರೆಗೆ ಕಲಾಪ ನಡೆಯಲಿದ್ದು, ಮೊದಲ 2 ದಿನ ಹೊಸ ಸಂಸದರಿಂದ ಪ್ರಮಾಣವಚನ ನಡೆಯಲಿದೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಜೂ. 19ರಂದು ಲೋಕಸಭೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಜೂ. 20ರಂದು ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಜು. 5ರಂದು ಹೊಸ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ.
ಇಂದಿನಿಂದ ನಡೆಯಲಿರುವ ಅಧಿವೇಶನದಲ್ಲಿ ತ್ರಿವಳಿ ತಲಾಖ್ ತಡೆ ವಿಧೇಯಕ ಸೇರಿದಂತೆ ಹಲವು ಮಹತ್ವದ ವಿಧೇಯಕಗಳ ಅಂಗೀಕಾರಕ್ಕೆ ಸಹಕರಿಸುವಂತೆ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಬೆಂಬಲ ಕೋರಲಿದೆ. ತ್ರಿವಳಿ ತಲಾಖ್ ವಿಧೇಯಕವನ್ನು ಸಚಿವ ಸಂಪುಟ ಈ ವಾರ ಅನುಮೋದಿಸಿತ್ತು. ಕೇಂದ್ರ ಸರ್ಕಾರ ಕಳೆದ ಚಳಿಗಾಲದ ಅಧಿವೇಶನದಲ್ಲಿಯೇ ತ್ರಿವಳಿ ತಲಾಖ್ ನಿಷೇಧದ ಹೊಸ ಮಸೂದೆಯನ್ನು ಜಾರಿಗೆ ತರಬೇಕಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಗದ ಕಾರಣ ಆ ಮಸೂದೆ ಮಂಡನೆಯಾಗಿರಲಿಲ್ಲ. ಸಂಸತ್ ನ ಎರಡೂ ಸದನಗಳಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಮತ್ತೆ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ವಿರೋಧಪಕ್ಷಗಳ ಬೆಂಬಲ ಕೋರುವ ಸಾಧ್ಯತೆಯಿದೆ.
ಇದುವರೆಗೂ ರಾಜ್ಯಸಭೆ ಸದಸ್ಯರಾಗಿದ್ದ ಅಮಿತ್ ಶಾ ಇದೇ ಮೊದಲ ಬಾರಿಗೆ ಸಂಸತ್ಗೆ ಕಾಲಿಡಲಿದ್ದಾರೆ. ಈ ಬಾರಿಯೂ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ 303 ಸಂಸದರನ್ನು ಹೊಂದಿದೆ. 52 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಪ್ರಜ್ಯಾ ಸಿಂಗ್ ಠಾಕೂರ್, ಕ್ರಿಕೆಟಿಗ ಗೌತಮ್ ಗಂಭೀರ್, ಗಾಯಕ ಹನ್ಸರಾಜ್ ಹನ್ಸ್, ಅತ್ಯಂತ ಕಿರಿಯ ಸಂಸದ ಎಂಬ ಖ್ಯಾತಿ ಪಡೆದಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕೇರಳದ ಏಕೈಕ ಮಹಿಳಾ ಸಂಸದೆ ರಮ್ಯಾ ಹರಿದಾಸ್ ಈ ಬಾರಿಯ ಸಂಸತ್ನ ಪ್ರಮುಖ ಆಕರ್ಷಣೆ.