ಬಿಜೆಪಿಯ ಆಹೋರಾತ್ರಿ ಧರಣಿ-ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ತೆರೆ

ಬೆಂಗಳೂರು, ಜೂ.16- ಜಿಂದಾಲ್ ಕಂಪೆನಿಗೆ ಮಾರಾಟ ಮಾಡಲು ಮುಂದಾಗಿರುವ ಜಮೀನು ಹಿಂಪಡೆಯುವುದು, ರೈತರ ಸಂಪೂರ್ಣ ಸಾಲ ಮನ್ನಾ, ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿವುದೂ ಸೇರಿದಂತೆ ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಕಳೆದ ಎರಡು ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ತೆರೆ ಕಂಡಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿಂದು ಆನಂದ್‍ರಾವ್ ವೃತ್ತದಿಂದ ಪಕ್ಷದ ಮುಖಂಡರಾದ ಅರವಿಂದ ಲಿಂಬಾವಳಿ, ಆರ್.ಅಶೋಕ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು ಹಾಗೂ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಆನಂದ್‍ರಾವ್ ವೃತ್ತದಿಂದ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಾವಿರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಶಿವಾನಂದ ವೃತ್ತದ ಬಳಿ ಬಂದು ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಿಂದಾಲ್ ಕಂಪೆನಿಗೆ ಭೂಮಿಯನ್ನು ಲೀಜ್‍ಗೆ (ಭೋಗ್ಯ) ನೀಡಲು ನಮ್ಮದೇನು ಅಭ್ಯಂತರವಿಲ್ಲ. ಆದರೆ, 3500ಕ್ಕೂ ಅಧಿಕ ಎಕರೆ ಜಮೀನನ್ನು ಮಾರಾಟ ಮಾಡಲು ನಮ್ಮ ವಿರೋಧವಿದೆ. ಸ್ವತಃ ಕಾಂಗ್ರೆಸ್ ಮುಖಂಡರೆ ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸರ್ಕಾರ ಜಮೀನು ನೀಡಲೇಬೇಕೆಂದು ಹೊರಟಿರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಜಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜಮೀನು ನೀಡಲೇಬೇಕೆಂದು ಹಠ ಹಿಡಿದಿರುವುದನ್ನು ನೋಡಿದರೆ ಇದರಲ್ಲಿ ಭಾರೀ ಪ್ರಮಾಣದ ಕಿಕ್‍ಬ್ಯಾಕ್ ನಡೆದಿರುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ದೂರಿದರು.

ಸಂಪುಟದ ತೀರ್ಮಾನವನ್ನು ಪುನರ್ ಪರಿಶೀಲಿಸಲು ಉಪ ಸಮಿತಿ ರಚನೆ ಮಾಡಿರುವುದು ಕೇವಲ ಕಣ್ಣೊರೆಸುವ ತಂತ್ರ. ಕೂಡಲೇ ನಿರ್ಣಯವನ್ನು ಹಿಂಪಡೆಯಲಿ ಎಂದು ಒತ್ತಾಯಿಸಿದರು.

ಐಎಂಎ ಹಗರಣದಲ್ಲಿ ಸರ್ಕಾರದ ಪ್ರಭಾವಿಗಳೇ ಶಾಮೀಲಾಗಿದ್ದಾರೆ. ಸಚಿವ ಜಮೀರ್‍ಅಹಮ್ಮದ್‍ಗೆ ಐಎಂಎ ಮುಖ್ಯಸ್ಥ ಮಹಮ್ಮದ್ ಮನ್ಸೂರ್ ಆಲಿಖಾನ್ ತುಂಬಾ ಆತ್ಮೀಯ. ಈಗ ಎಸ್‍ಐಟಿ ರಚನೆ ಮಾಡಿರುವುದು ಪ್ರಭಾವಿಗಳನ್ನು ರಕ್ಷಣೆ ಮಾಡಿ ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯುವುದಕ್ಕಾಗಿ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಹಗರಣವಾಗಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದರು.

ಎಸ್‍ಐಟಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಇಲ್ಲ. ಐಎಂಎ ಬೇರುಗಳು ಬೇರೆ ಬೇರೆ ರಾಜ್ಯಗಳಲ್ಲದೆ, ವಿದೇಶಗಳಿಗೂ ಹಬ್ಬಿವೆ. ಸಿಬಿಐ ತನಿಖೆಗೆ ಒಳಪಡಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆದು ಹಣ ಹೂಡಿಕೆ ಮಾಡಿರುವ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.

ಮಹಮ್ಮದ್ ಮನ್ಸೂರ್ ಆಲಿಖಾನ್ ಆಸ್ತಿಪಾಸ್ತಿಯನ್ನು ತಕ್ಷಣವೇ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಿ ಸಂಕಷ್ಟದಲ್ಲಿರುವವರ ನೆರವಿಗೆ ದಾವಿಸಬೇಕು. ಇಲ್ಲದಿದ್ದರೆ ಹಣ ಕಳೆದುಕೊಂಡವರಿಗೆ ಏನೂ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಹೋರಾಟ:
ಸಮ್ಮಿಶ್ರ ಸರ್ಕಾರ ಎಲ್ಲಾ ರಂಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಸಾಲ ಮನ್ನಾ ಎಂಬುದು ಕೇವಲ ಕಣ್ಣೊರೆಸುವ ತಂತ್ರ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಹೇಳಿದ್ದರಿಂದ ಜನತೆ ಅವರಿಗೆ 38 ಸ್ಥಾನಗಳನ್ನು ಕೊಟ್ಟರು. ಇಲ್ಲದಿದ್ದರೆ ಇಷ್ಟು ಸ್ಥಾನಗಳೂ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಅನೇಕ ಕಡೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಸಚಿವರೂ ಕೂಡ ಪ್ರವಾಸ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ವಿರುದ್ಧ ದ್ವೇಷ ಸಾಧಿಸುವುದನ್ನು ನಿಲ್ಲಿಸಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಕಾವಲು ನಾಯಿಯಂತೆ ಕೆಲಸ ಮಾಡುತ್ತವೆ. ನಾವು ಮಾಡುವ ಪ್ರತಿ ತಪ್ಪುಗಳನ್ನು ಅವಲೋಕಿಸಿ ಮುಂದೆ ಈ ರೀತಿ ಪ್ರಮಾದವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ಮಾಡುತ್ತವೆ. ಆದರೆ, ಅಂತಹ ಮಾಧ್ಯಮಗಳ ವಿರುದ್ಧವೇ ಕುಮಾರಸ್ವಾಮಿ ಸೇಡು ತೀರಿಸಿಕೊಳ್ಳಲು ಹೊರಟಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಮಾಧ್ಯಮಗಳು ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಜನತೆಯೇ ತೀರ್ಮಾನಿಸುತ್ತಾರೆ.ಮುಖ್ಯಮಂತ್ರಿಯಾಗಿ ಮಾಧ್ಯಮಗಳ ವಿರುದ್ಧ ನಿಮ್ಮ ವರ್ತನೆ ಸರಿಯಲ್ಲ ಎಂದು ಆಕ್ಷೇಪಿಸಿದರು.

ಮುಖಂಡ ಆರ್.ಅಶೋಕ್ ಮಾತನಾಡಿ, ಕುಮಾರಸ್ವಾಮಿ ಅವರು ನಮ್ಮ ಜತೆ ಚರ್ಚೆ ಮಾಡುವ ಮೊದಲು ಸಾರ್ವಜನಿಕರ ಜತೆ ಚರ್ಚಿಸಲಿ. ನಾವು ಪ್ರತಿಭಟನೆ ನಡಸುತ್ತಿರುವುದು ಜನರ ಪರವಾಗಿ. ಅನೇಕ ಕಡೆ ರೈತರ ಸಾಲ ಮನ್ನವಾಗದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಲೂ ಬ್ಯಾಂಕಿನವರು ನೋಟಿಸ್ ನೀಡುತ್ತಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಡೆಯುತ್ತಿವೆ. ರೈತರ ಖಾತೆಗೆ ಜಮೆ ಮಾಡಿದ್ದ ಹಣವನ್ನು ಹಿಂಪಡೆಯಲಾಗಿದೆ. ಇದು ಸಮ್ಮಿಶ್ರ ಸರ್ಕಾರ ನಡೆದುಕೊಳ್ಳುವ ರೀತಿ ಎಂದು ವ್ಯಂಗ್ಯವಾಡಿದರು.

ಐಎಂಎ ಹಗರಣದಲ್ಲಿ ಸಚಿವ ಜಮೀರ್ ಅಹಮ್ಮದ್ ನೇರವಾಗಿ ಶಾಮೀಲಾಗಿದ್ದಾರೆ. ಎಸ್‍ಐಟಿ ರಚನೆ ಮಾಡಿರುವುದೇ ಕಾಂಗ್ರೆಸ್ ಮತ್ತು ಜೆಡಿಎಸ್‍ನವರನ್ನು ರಕ್ಷಣೆ ಮಾಡಲು. ಸರ್ಕಾರಕ್ಕೆ ಕಳಕಳಿಯಿದ್ದರೆ ಸಿಬಿಐಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ