ಬೆಂಗಳೂರು, ಜೂ. 13- ಐಎಂಎ ಸಂಸ್ಥೆ ವಂಚನೆ ಪ್ರಕರಣದ ಎಫೆಕ್ಟೋ ಏನೋ ಮಾಜಿ ಮೇಯರ್ ಸಂಪತ್ರಾಜ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಸಂಪತ್ರಾಜ್ ಅವರಿಗೂ ಐಎಂಎ ಸಂಸ್ಥೆಗೂ ನಂಟಿದೆ ಎಂದು ಹೇಳಲಾಗುತ್ತಿದ್ದು, ಸಂಪತ್ರಾಜ್ ಅವರು, ತಮ್ಮ ಬಾಮೈದುನನ ಒಡೆತನದ ಅಡೋನೈ ಶೆಲ್ಟರ್ ಕಂಪನಿ ಮೂಲಕ ಐಎಂಎ ಸಂಸ್ಥೆ ನಿರ್ಮಿಸುತ್ತಿರುವ 14 ಸ್ಕೈವಾಕ್ಗಳ ಪೈಕಿ ಎರಡು ಸ್ಕೈವಾಕ್ಗಳಿಗೆ ಟೆಂಡರ್ ಕೊಡಿಸಿದ್ದರು ಎನ್ನಲಾಗಿದೆ.
ಐಎಂಎ ಕಂಪನಿ ಜೊತೆ ಸೇರಿ ನಗರದಲ್ಲಿ ಸ್ಕೈವಾಕ್ಗಳನ್ನು ನಿರ್ಮಿಸುವುದಾಗಿ ಅಡೋನಿ ಕಂಪನಿ ದಾಖಲೆಗಳಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ. ಸಂಪತ್ರಾಜ್ ಅವರ ಅವಧಿಯಲ್ಲೇ ಈ ಕಂಪನಿಗೆ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಸಿಕ್ಕಿದೆ ಎಂದು ಕೆಲ ಕಾರ್ಪೋರೇಟೊರ್ಗಳೇ ಹೇಳುತ್ತಾರೆ.
ಐಎಂಎ ಕಂಪನಿ ವಂಚನೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್ ಪೋನ್ ಸ್ವೀಚ್ ಆಫ್ ಆಗಿದೆ.
ತಮ್ಮ ಬಾಮೈದುನನ ಅಡೋನೈ ಕಂಪನಿ ಮೂಲಕ ಐಎಂಎಗೆ ಟೆಂಡರ್ ಕೊಡಿಸಿ ಅನಾವಶ್ಯಕ ಕಡೆಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಜಾಹೀರಾತು ಬೈಲಾ ಉಲ್ಲಂಘನೆ ಮಾಡಿ ತರಾತುರಿಯಲ್ಲಿ ಟೆಂಡರನ್ನು ಸಂಪತ್ರಾಜ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಈಗ ಅವರು ಯಾರ ಸಂಪರ್ಕಕ್ಕೂ ಸಿಗದಿರುವುದು ಅಚ್ಚರಿ ಮೂಡಿಸಿದೆ.