ಐಎಂಎ ವಂಚನೆ ಬಹಿರಂಗ-ಅತಂತ್ರರಾದ ಸರ್ಕಾರಿ ವಿಕೆಒ ಶಾಲೆಯ ಮಕ್ಕಳು

ಬೆಂಗಳೂರು, ಜೂ.13-ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಹಾಗೆ ಶಿವಾಜಿನಗರದಲ್ಲಿರುವ ಸರ್ಕಾರಿ ಶಾಲೆ ಮಕ್ಕಳು ಈಗ ಅಕ್ಷಶಃ ಅತಂತ್ರರಾಗಿ ಬಿಟ್ಟಿದ್ದಾರೆ.

ಶಿವಾಜಿನಗರದಲ್ಲಿರುವ ಸರ್ಕಾರಿ ವಿಕೆಒ ಶಾಲೆಯನ್ನು ಐಎಂಎ ಸಂಸ್ಥೆಯ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ದತ್ತು ಪಡೆದುಕೊಂಡು ಅವರೇ ನಡೆಸುತ್ತಿದ್ದರು.

ಈ ಶಾಲೆಯಲ್ಲಿ ಸುಮಾರು 960 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂವರು ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿದ್ಧಾರೆ. ಉಳಿದಂತೆ 70ಮಂದಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಗ್ರಾಹಕರಿಗೆ ಐಎಂಎ ಸಂಸ್ಥೆ ವಂಚಿಸಿರುವುದು ಬಹಿರಂಗವಾಗುತ್ತಿದ್ದಂತೆ ಶಿಕ್ಷಕರು, ಸಿಬ್ಬಂದಿಗಳು ಶಾಲೆಗೆ ಬರುತ್ತಿಲ್ಲ. ಹಾಗಾಗಿ ಶಾಲೆಯನ್ನು ಬಂದ್ ಮಾಡಲಾಗಿದೆ. ಇತ್ತ ಶಿಕ್ಷಕರು ಇಲ್ಲ, ಶಾಲೆಯೂ ತೆಗೆಯುತ್ತಿಲ್ಲ ಹಾಗಾಗಿ ಮಕ್ಕಳು ಅತಂತ್ರರಾಗಿದ್ದಾರೆ.

ಪ್ರತಿದಿನ ಶಾಲೆಯ ಮುಂದೆ ಮಕ್ಕಳ ಪೋಷಕರು ಆತಂಕದಿಂದ ಬಂದು ಶಾಲೆ ಯಾವಾಗ ತೆರೆಯುತ್ತದೆ. ನಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಭವಿಷ್ಯವೇನು ಎಂದು ಪ್ರಶ್ನಿಸುತ್ತಿದ್ದಾರೆ.

ಆದರೆ ಡಿಡಿಪಿಐ ಮಾತ್ರ ಈ ಸರ್ಕಾರಿ ಶಾಲೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಬದಲಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಸದ್ಯದಲ್ಲೇ ಶಾಲೆ ತೆರೆಯುತ್ತದೆ. ಯಾರು ಆತಂಕ ಪಡುವುದು ಬೇಡ ಎಂದು ಅಭಯ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ