ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಏಕಾಏಕಿ ಎಸಿಬಿ ದಾಳಿಯಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಆಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಎಸಿಬಿ ಅಧಿಕಾರಿಗಳು ಬೆಳ್ಳಂಬೆಳ್ಳಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ ಕರ್ನಾಟಕ ವಿವಿ ಮಾಜಿ ಕುಲಸಚಿವ ಕಲ್ಲಪ್ಪ ಹೊಸಮನಿ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ಧಾರವಾಡದ ಶ್ರೀನಗರದಲ್ಲಿರುವ ಮನೆ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ 6 ತಿಂಗಳ ಹಿಂದೆ ಹೊಸಮನಿ ಅವರ ಮೇಲೆ ಕೇಳಿಬಂದ ಆರೋಪಗಳ ಹಿನ್ನೆಲೆ ಸರ್ಕಾರವು ಅವರನ್ನು ಕುಲಸಚಿವ ಸ್ಥಾನದಿಂದ ಕೆಳಗೆ ಇಳಿಸಿತ್ತು. ಗುಲಗುಂಜಿಕೊಪ್ಪದ ಸಂಬಂಧಿಕರ ಮನೆ ಮೇಲೆ ಕೂಡ ದಾಳಿಯಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಇ ಮಹಾದೇವಪ್ಪ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ಮಾಹಿತಿಯನ್ವಯ ಅಧಿಕಾರಿಗಳಾದ ಡಿಕೆಪಿಎಸ್ ಡಿಎಸ್ಪಿ ಮಂಜುನಾಥ್ ಬಿ.ಕೌರಿ, ಮೋಹನ್ ಕೊಟ್ಟಾರಿ, ಚಿಕ್ಕಮಗಳೂರು ಇನ್ಸ್ಪೆಕ್ಟರ್ ಹಾಲಪ್ಪ, ಜಯರಾಮೇಗೌಡ ಅವರು ಎಸಿಬಿ ಎಸ್ಪಿ ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಧಿಕಾರಿ ಸಂಬಂಧಿತ ಬೆಂಗಳೂರು ಸಿದ್ದೇನಹಳ್ಳಿ ಮನೆ ಹಾಗೂ ಚಿತ್ರದುರ್ಗ ಹೊಳಲ್ಕೆರೆಯ ಮನೆ, ಮಲ್ಲಿಕಟ್ಟೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಪಿಡಬ್ಲ್ಯೂಡಿ ಇಲಾಖೆ ಎಇಇ(ಜೋಯ್ಡಾ ಉಪವಿಭಾಗ) ಉದಯ್ ಡಿ. ಚಬ್ಬಿ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ಬೆಳಗಾವಿ ಕೃಷಿ ಕಾಲೋನಿಯಲ್ಲಿ ಉದಯ್ ಮನೆ ಇದೆ. ಅಧಿಕಾರಿಯ ತಾಯಿಯ ಮನೆಯ ಮೇಲೆ ಸಹ ದಾಳಿಯಾಗಿದೆ. ಎಸಿಬಿ ಡಿಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.