ಬೆಂಗಳೂರು: ಶಿವಾಜಿನಗರದ ಮಹಮ್ಮದ್ ಮನ್ಸೂರ್ ಖಾನ್ ಒಡೆತನದ ಪ್ರತಿಷ್ಠಿತ ಐಎಂಎ ಚಿನ್ನಾಭರಣ ಅಂಗಡಿ ಮೇಲೆ ಹೂಡಿಕೆ ಮಾಡಿದವರು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಹೂಡಿದ ಹಣಕ್ಕೆ ಹೆಚ್ಚಿನ ಮೊತ್ತ ಸಿಗುತ್ತದೆ ಎಂದುಕೊಂಡವರು ಈಗ ಅಸಲೂ ಕೂಡ ಇಲ್ಲದೆ ಕಂಗಾಲಾಗಿದ್ದಾರೆ.
ಐಎಂಎನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡ ಸಾರ್ವಜನಿಕರು ತಡರಾತ್ರಿವರೆಗೂ ದೂರು ದಾಖಲಿಸಿದ್ದಾರೆ. ಇಂದು ಬೆಳಗ್ಗೆ ಮತ್ತಷ್ಟು ದೂರುಗಳು ದಾಖಲಾಗುವ ಸಾಧ್ಯತೆ ಇದೆ. ದೂರುಗಳನ್ನು ನೋಡಿದ ಪೊಲೀಸರೇ ಹೌಹಾರಿದ್ದಾರೆ.
ಮಗಳ ಮದುವೆ ಸಲುವಾಗಿ ರಾಯಚೂರಿನ ಸಿಂಧನೂರು ಮೂಲದ ಅಪ್ರೋಜ್ ಭಾಷಾ 40 ಲಕ್ಷ ಹೂಡಿಕೆ ಮಾಡಿದ್ದರು. ಕಳೆದ ಮೂರು ತಿಂಗಳಿಂದ ಒಂದು ರೂಪಾಯಿಯೂ ವಾಪಾಸು ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ನಾನಾ ಕನಸು ಹೊತ್ತು ಹೂಡಿಕೆ ಮಾಡಿದವರು ಈಗ ಮಹಮ್ಮದ್ ಮನ್ಸೂರ್ ಖಾನ್ ಅವರನ್ನು ಶಫಿಸುತ್ತಾ, ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಮುಂದೇನು ಎನ್ನುವ ಪ್ರಶ್ನೆಯೂ ಅವರನ್ನು ಕಾಡಿದೆ.
ಆ್ಯಪ್ ಸ್ಥಗಿತ
ಐಎಂಎ ಹೆಸರಲ್ಲಿದ್ದ ಮೊಬೈಲ್ ಆ್ಯಪ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಆ್ಯಪ್ನಲ್ಲಿ ಹೂಡಿಕೆ, ಬಡ್ಡಿ, ತಿಂಗಳ ರಿಟರ್ನ್ಸ್ ಮಾಹಿತಿ ಲಭ್ಯವಾಗುತ್ತಿತ್ತು. ಆದರೆ ಈಗ ಆ್ಯಪ್ ಸ್ಥಗಿತಗೊಂಡಿದೆ. ಈ ವಿಚಾರ ಕೂಡ ಅನೇಕರನ್ನು ಚಿಂತೆಗೀಡು ಮಾಡಿದೆ.
ರಜೆ ಘೋಷಿಸಿದ್ದ ಮನ್ಸೂರ್
ರಂಜಾನ್ ಹಬ್ಬದ ಹೆಸರಲ್ಲಿ ರಜೆ ಮನ್ಸೂರ್ ಖಾನ್ ರಜೆ ನೀಡಿದ್ದ. ಜೂನ್ 5-10ರವರೆಗೆ ರಜೆ ಇದೆ. ಯಾರು ಐಎಂಎ ಕಚೇರಿ ಬಳಿ ಬರಬೇಡಿ ಎಂದು ಮೆಸೇಜ್ ಮಾಡಿದ್ದ. ಆಗಲೇ ಅನೇಕರು ಸಂಶಯಗೊಂಡಿದ್ದರು. ಎಸ್ಕೇಪ್ ಆಗಲು ಆತ ಈ ರೀತಿ ಮಾಡಿದ್ದ ಎನ್ನಲಾಗಿದೆ.
ಏನಿದು ಪ್ರಕರಣ?
ಶಿವಾಜಿನಗರ ಪ್ರತಿಷ್ಠಿತ ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋ ನಿನ್ನೆ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು. ತನಗೆ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹಣ ಪಡೆದು ಹಿಂದಿರುಗಿಸದೆ ವಂಚಿಸುತ್ತಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮಾಡಿರುವ ಮನ್ಸೂರ್ ಖಾನ್ ನಗರ ಪೊಲೀಸ್ ಕಮಿಷನರ್ಗೆ ಕಳುಹಿಸಿಕೊಟ್ಟಿದ್ದಾರೆ.
ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮನ್ಸೂರ್ಖಾನ್ಗೆ ಹಣ ನೀಡಿದ ನೂರಾರು ಜನರು ಮತ್ತು ಹೂಡಿಕೆದಾರರು ಶಿವಾಜಿನಗರದ ಐಎಂಎ ಜ್ಯುವೆಲರಿ ಅಂಗಡಿ ಬಳಿ ಜಮಾಯಿಸಿದ್ದರು. ನಂತರ ಅಂಗಡಿಗೆ ಮುತ್ತಿಗೆ ಹಾಕಲು ಜನರು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದರು.
ಶಾಸಕ ರೋಷನ್ ಬೇಗ್ ನನ್ನಿಂದ 400 ಕೋಟಿ ಹಣ ಪಡೆದುಕೊಂಡಿದ್ದಾರೆ. ಕೇಳಿದರೆ ರೌಡಿಗಳನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಾರೆ. ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ನಾನು ಹಳ್ಳಿಯೊಂದರಲ್ಲಿ ನನ್ನ ಕುಟುಂಬದೊಂದಿಗೆ ತಲೆ ಮರೆಸಿಕೊಂಡಿದ್ದೇನೆ. ನೀವು ಈ ವಿಡಿಯೋ ಕೇಳುವುದರೊಳಗೆ ನಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ಮನ್ಸೂರ್ ಖಾನ್ ವಿಡಿಯೋದಲ್ಲಿ ಹೇಳಿದ್ದರು. ಆದರೆ, ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.