ಅರಬ್ಬಿಯಲ್ಲಿ ವಾಯುಭಾರ ಕುಸಿತ, ಮುಂಗಾರು ಪ್ರವೇಶ; ಕರಾವಳಿಯಲ್ಲಿ ಚಂಡಮಾರುತದ ಭೀತಿ!

ಬೆಂಗಳೂರು; ಜೂನ್.8 ರಂದು ಕೇರಳಕ್ಕೆ ಪ್ರವೇಶಿಸಿದ್ದ ಮುಂಗಾರು ಮಾರುತಗಳು ಬಹುತೇಕ ಇಂದು ರಾಜ್ಯಕ್ಕೆ ಅಪ್ಪಳಿಸಲಿವೆ. ಇದೇ ಸಮಯದಲ್ಲಿ ಅರಬ್ಬಿ ಮುದ್ರದಲ್ಲೂ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿ ತೀರ ಭಾಗದಲ್ಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.

ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಸಮುದ್ರದಿಂದ ಕಿನಾರೆಯತ್ತ ಈಗಾಗಲೇ ಗಾಳಿ ಅತ್ಯಂತ ರಭಸದಿಂದ ಕೂಡಿದ್ದು,  ಮಂಗಳವಾರ ಗಾಳಿಯ ವೇಗ 55ರಿಂದ 75 ಕಿ.ಮೀ. ವರೆಗೂ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಜೂನ್.11ರಿಂದ 13ರ ವರೆಗೆ ಕರ್ನಾಟಕ ಮತ್ತು ಕೇರಳಕ್ಕೆ ಹವಾಮಾನ ಇಲಾಖೆ ಹಳದಿ ಬಣ್ಣದ ಎಚ್ಚರಿಕೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಸಮುದ್ರದಲ್ಲಿ ತೀವ್ರ ಉಬ್ಬರವಿಳಿತಗಳು ಕಾಣಿಸಿಕೊಂಡಿದ್ದು ಉಳ್ಳಾಲ, ಸೋಮೇಶ್ವರ, ಪಣಂಬೂರು ಸೇರಿದಂತೆ ಕರಾವಳಿ ಭಾಗದ ಪ್ರಸಿದ್ಧ ಬೀಚ್​ಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದೆ. ಅಲ್ಲದೆ ಬಂದರುಗಳಲ್ಲಿ ಮುನ್ನೆಚ್ಚರಿಕೆಯ ಸಂಕೇತದ ಬಾವುಟ ಹಾರಿಸುವಂತೆ ಸೂಚನೆ ನೀಡಲಾಗಿದ್ದು, ಕರಾವಳಿಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ತುರ್ತು ಸೇವೆಗಾಗಿ ಸಾರ್ವಜನಿಕರು ಟೋಲ್‌ಫ್ರೀ ಸಂಖ್ಯೆ 1077 ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ