ನವದೆಹಲಿ: ಕಥುವಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳಲ್ಲಿ ಐವರು ಆರೋಪಿಗಳು ದೋಷಿಗಳೆಂದು ಪಠಾಣ್ಕೋಟ್ ಕೋರ್ಟ್ ತೀರ್ಪು ನೀಡಿದೆ.
ಐವರು ಆರೋಪಿಗಳಾದ ಕಥುವಾ ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್, ಆತನ ಮಗ ವಿಶಾಲ್ ಹಾಗೂ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜುರಿಯಾ ಮತ್ತು ಸುರೇಂಸರ್ ವರ್ಮಾ ಮತ್ತು ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಎಂಬುವವರು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದ್ದು, ಎಲ್ಲರೂ ಜೀವಾವಧಿಯಿಂದ ಗಲ್ಲುಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ.
2018, ಜನವರಿ 10ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಕರ್ವಾಲ್ ಅಲೆಮಾರಿ ಸಮುದಾಯದ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆ ಮಾಡಲಾಗಿತ್ತು. ಘಟನೆ ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ಆಕ್ರೋಶಗಳು ವ್ಯಕ್ತವಾಗಿದ್ದವು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು.
ಕಳೆದ ವರ್ಷ ಏಪ್ರಿಲ್ 9ರಂದು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ದಾಖಲಿಸಿದ ಜಮ್ಮು ಮತ್ತು ಕಾಶ್ಮೀರದ ಅಪರಾಧ ಇಲಾಖೆ, ಬಾಲಕಿಯನ್ನು ದೇವಸ್ಥಾನದಲ್ಲಿ ಕೂಡಿಟ್ಟು ನಾಲ್ಕು ದಿವಸಗಳ ಕಾಲ ಆಕೆಗೆ ಡ್ರಗ್ಸ್ ನೀಡಿ ನಿರಂತರವಾಗಿ ಅತ್ಯಾಚಾರ ನಡೆಸಿ, ಬಳಿಕ ಕೊಲೆ ಮಾಡಿ ಹತ್ತಿರದ ಅರಣ್ಯದಲ್ಲಿ ಆಕೆಯ ಶವವನ್ನು ಎಸೆಯಲಾಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಿತ್ತು.
ಅತ್ಯಾಚಾರಕ್ಕೆ ಸಹಾಯ ಮಾಡಿದ ಹಾಗೂ ಸಾಕ್ಷ್ಯ ನಾಶಮಾಡಲು ಪ್ರಯತ್ನಿಸಿದವರನ್ನೂ ಸೇರಿ ಒಟ್ಟು 8 ಮಂದಿಯನ್ನು ಆರೋಪಿಗಳು ಎಂದು ಗುರುತಿಸಲಾಗಿತ್ತು. ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್ 302, 376, 201 ಮತ್ತು 120 ಬಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಎಂಟು ಮಂದಿ ಆರೋಪಿಗಳಲ್ಲಿ ಏಳು ಮಂದಿಯ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಉಳಿದ ಒಬ್ಬನನ್ನು ಬಾಲಾಪರಾಧಿ ಎಂಬ ಕಾರಣಕ್ಕೆ ಪ್ರಕರಣದಿಂದ ಕೈಬಿಡಲಾಗಿತ್ತು.
Kathua rape-murder case: Mastermind Sanji Ram, five others convicted by special court